ಬೆಂಗಳೂರ್ .12 ಪಕ್ಷದಲ್ಲಿ ತಾವು ಇದುವರೆಗೆ
ಯಾವುದೇ ಗುಂಪುಗಾರಿಕೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ
ಸ್ಥಾನಕ್ಕೆ ಯಾವುದೇ ಲಾಬಿ ನಡೆಸಿಲ್ಲ. ಲಾಬಿ ಮಾಡುವ ಅವಶ್ಯಕತೆಯೂ ತಮಗಿಲ್ಲ ಇಲ್ಲ ಎಂದು
ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್
ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ತಾವೆಂದಿಗೂ ಜಾತಿ, ಧರ್ಮದ ಆಧಾರದಲ್ಲಿ ಗುಂಪು
ಕಟ್ಟಿಲ್ಲ. ಒಂದು ವೇಳೆ ಒಕ್ಕಲಿಗ ಸಮುದಾಯದ ಆಧಾರದ ಮೇಲೆ ಗುಂಪುಗಾರಿಕೆ ಮಾಡುವುದೇ ಆಗಿದ್ದರೆ ಪಕ್ಷದಲ್ಲಿ ಎಸ್.ಎಂ.ಕೃಷ್ಣ ಅವರ ಅವಧಿ ಮುಗಿದ
ಸಂದರ್ಭದಲ್ಲಿಯೇ ಗುಂಪು ಕಟ್ಟಬಹುದಿತ್ತು. ಆದರೆ ತಾವೆಂದಿಗೂ
ಅಂತಹ ಕೆಲಸ ಮಾಡಿಲ್ಲ ಎಂದರು.ಪಕ್ಷದಲ್ಲಿ ಕಾರ್ಯಕರ್ತರ ವಿಶ್ವಾಸ ಅತಿಮುಖ್ಯ. ಉಪಚುನಾವಣೆಯ ಸೋಲಿನಿಂದಾಗಿ
ಕಾರ್ಯಕರ್ತರು ವಿಶ್ವಾಸ ಕಳೆದುಕೊಳ್ಳಬಾರದು.ಸದ್ಯಕ್ಕೆ
ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ನಾಯಕ ಸ್ಥಾನಗಳು ಯಾವುದು ಖಾಲಿಯಿಲ್ಲ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯನ್ನು
ಹೈಕಮಾಂಡ್ ಇನ್ನೂ ಅಂಗೀಕರಿಸಿಲ್ಲ. ಚುನಾವಣೆಯ ಸೋಲಿಗೆ
ಸಿದ್ದರಾಮಯ್ಯ, ಗುಂಡೂರಾವ್ ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಉಪ ಚುನಾವಣೆಯಲ್ಲಿ ಸೋಲು ಗೆಲುವು ಇರುವುದು ಸಹಜ. ತಾವು ಸಹ
ಹಿಂದೆ ಇಂತಹ ಅನೇಕ ಉಪಚುನಾವಣೆಗಳನ್ನು ನಡೆಸಿ ಅದರ
ಫಲಿತಾಂಶದ ಅನುಭವವೂ ತಮಗಿದೆ. ಜನ ಸೇರಿದ ತಕ್ಷಣ ಮತ
ಹಾಕುವುದಿಲ್ಲ. ಮತ ರಾಜಕೀಯವೇ ಬೇರೆ ಚುನಾವಣಾ ರಾಜಕೀಯವೇ ಬೇರೆ ಎಂದು ಮಾರ್ಮಿಕವಾಗಿ ಡಿ.ಕೆ.ಶಿವಕುಮಾರ್ ಹೇಳಿದರು.ದೆಹಲಿಯಲ್ಲಿ ನಡೆಯುತ್ತಿರುವ
ಭಾರತ್ ಬಚಾವ್ ಆಂದೋಲನದಲ್ಲಿ ಪಾಲ್ಗೊಳ್ಳಲು ತಾವಿಂದು
ದೆಹಲಿಗೆ ತೆರಳುತ್ತಿದ್ದೇನೆ. ಸದ್ಯ ಮಾಧ್ಯಮಗಳು ತಮ್ಮನ್ನು
ಮುಕ್ತವಾಗಿ ಬಿಟ್ಟರೆ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಜವಾಬ್ದಾರಿ ವಹಿಸಿಕೊಳ್ಳುವೀರಾ ಎಂಬ ಪ್ರಶ್ನೆಗೆ ಶಿವಕುಮಾರ್ ಹಾರಿಕೆಯ ಉತ್ತರ ನೀಡಿದರು.