ಮಧ್ಯಂತರ ಚುನಾವಣೆ ಎದುರಾಗಲ್ಲ,ಅವಕಾಶವಾದಿಗಳ ಕೂಟ ರಚನೆಯೂ ಆಗಲ್ಲ:ಸಿ.ಟಿ ರವಿ ಲೇವಡಿ

C T RAVI

 ಬೆಂಗಳೂರು,ನ 28-ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಹಗಲುಗನಸಿನಲ್ಲಿ ಸಿದ್ದರಾಮಯ್ಯ, ಮತ್ತೊಮ್ಮೆ ಅವಕಾಶವಾದಿ ಕೂಟ ರಚನೆಯ ಕನಸಿನಲ್ಲಿ ಕುಮಾರಸ್ವಾಮಿ ಇದ್ದಾರೆ,ಆದರೆ ಉಪ ಚುನಾವಣೆಯಲ್ಲಿ ಜನ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಸಚಿವ ಸಿ.ಟಿ ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ 15 ತಿಂಗಳು ಆಡಳಿತದ ವೇಳೆ ಪ್ರತಿನಿತ್ಯ ಆರೋಪ ಪ್ರತ್ಯಾರೋಪ,ಸ್ವಜನ ಪಕ್ಷಪಾತದ ಆಪಾದನೆ,ರಿಮೋಟ್ ಕಂಟ್ರೋಲ್ ಆರೋಪ ಕಾಂಗ್ರೆಸ್,ಜೆಡಿಎಸ್ ಶಾಸಕರ ನಡುವೆಯೇ ಬಂದಿದ್ದು. ಕುಮಾರಸ್ವಾಮಿ ಸಾಂದರ್ಭಿಕ ಶಿಶು ಎಂದಿದ್ದರು,ಕಾಂಗ್ರೆಸ್ ನ ಗುಲಾಮನಾಗಿದ್ದೆ ಈಗ ಮುಕ್ತಿ‌ಸಿಕ್ಕಿದೆ ಎಂದು ಸರ್ಕಾರ ಪತನಗದ ಬಳಿಕ  ಹೇಳಿದ್ದರು ಈಗ ಮತ್ತೆ ಹಗಲುಗನಸು ಕಾಣಲು ಆರಂಭಿಸಿದ್ದಾರೆ.ಡಿ.9 ರ ಫಲಿತಾಂಶದ ನಂತರ ಮತ್ತೆ ಅವಕಾಶವಾದಿ ಕೂಟ ಕಟ್ಟಬಹುದು ಎಂದು ಹಗಲುಗನಸು ಕಾಣುತ್ತಿದ್ದಾರೆ.ಅದಕ್ಕಾಗಿ ಕಣ್ಣೀರ‌ ಕೋಡಿ ಹರಿಸುತ್ತಿದ್ದಾರೆ,ನಟರಿಗಾದರೂ ನಟನೆ ಅವರ ವೃತ್ತಿ ಆದರೂ ಕೂಡ ಗ್ಲಿಸರಿನ್ ಇಲ್ಲದೆ ಅವರಿಗೆ ಕಣ್ಣೀರು ಬರಲ್ಲ, ನಟಭಯಂಕರರಿಗೆ ಮಾತ್ರ ಗ್ಲಿಸರಿನ್ ಇಲ್ಲದೇ ಕಣ್ಣೀರು ಬರಲಿದೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

 ತನ್ನ ಪಕ್ಷದಿಂದ ಎರಡು ಬಾರಿ ಶಾಸಕರನ್ನಾಗಿ ಮಾಡಿದವರನ್ನ ಈಗ ಬಾಂಬೆ ಕಳ್ಳ ಎಂದು ಕರೆಯಿತ್ತಾರೆ.ಪಕ್ಷದಲ್ಲಿ ಇದ್ದರೆ ಸಂಪನ್ನ,ಪಕ್ಷ ಬಿಟ್ಟರೆ ಕಳ್ಳ,ಪಕ್ಷದಲ್ಲಿ ಇದ್ದವರು ಏನು ಮಾಡಿದರೂ ಸಚ್ಛಾರಿತ್ರರು ಪಕ್ಷ ಬಿಟ್ಟವರು ಪರಮ ಭ್ರಷ್ರಾಗುತ್ತಾರೆ. ವಿಧಾನಸೌಧದಲ್ಲಿ ಆಡಳಿತ ನಡೆಸಲು ಯಾವುದೋ ಜನ್ಮದ ಪುಣ್ಯ ಬೇಕು ಅದರ ಪಾವಿತ್ರ್ಯತೆ ಕಡೆಗಣಿಸಿ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಆಡಳಿತ ಕೇಂದ್ರ ಬದಲಾಯಿಸಿ ವಿಧಾನಸೌಧದ ಗೌರವವನ್ನು ಹೋಟೆಲ್ ನಲ್ಲಿ ಡೀಲಿಂಗ್ ಲಾಭಿಗೆ ಇಳಿಸಿದ್ದನ್ನು ಜನ ಮರೆತಿದ್ದಾರೆ ಎಂದುಕೊಂಡಿದ್ದಾರೆ ಎಂದು  ಆರೋಪಿಸಿದರು.

 ಮಾತೆತ್ತಿದರೆ ನಮ್ಮನ್ನ ಕೋಮುವಾದಿ ಎನ್ನುತ್ತಾರೆ ಆದರೆ 2013 ರಲ್ಲಿ 123 ಸ್ಥಾನ ಕಾಂಗ್ರೆಸ್, ಬಿಜೆಪಿ 48, ಜೆಡಿಎಸ್ 40 ಸ್ಥಾನ ಗಳಿಸಿತ್ತು ನಂತರದ ಚುನಾವಣೆಯಲ್ಲಿ ಬಿಜೆಪಿ 104, ಜೆಡಿಎಸ್ 37 ಕಾಂಗ್ರೆಸ್ ಗೆ 78 ಸ್ಥಾನ ಬಂತು, ಆದರೂ ಎರಡೂ ಪಕ್ಷ ಪವಿತ್ರ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಸಿಂಗಲ್ ನಂಬರ್ ಗೆ ಇಳಿಸುವ ಘೋಷಣೆಯ ಮಾಡಿ ಲೋಕಸಭಾ ಪ್ರಚಾರ ನಡೆಸಿದರು ಆದರೆ ಬಡಾಯಿ ಕೊಚ್ಚಿಕೊಂಡವರು ಒಂದೊಂದು ಸ್ಥಾನ ಮಾತ್ರ ಗೆದ್ದುಕೊಂಡರು.177 ಕ್ಷೇತ್ರದಲ್ಲಿ ಬಿಜೆಪಿಗೆ ಮೆಜಾರಿಟಿ ಬಂತು ಹಾಗಾದರೆ ಅಷ್ಟೂ ಕ್ಷೇತ್ರದ ಜನ ಕೋಮುವಾದಿಗಳಾ ಎಂದು ಪ್ರಶ್ನಿಸಿದರು.

 ಯಾವುದೇ ಪಕ್ಷ ತತ್ವ ಭ್ರಷ್ಟವಾದಾಗ,ಜನ ವಿರೋಧಿಯಾದಾಗ, ಪಕ್ಷವೇ ಹೋಲ್ ಸೇಲ್ ಡಿಲಿಂಗ್ ಗೆ ನಿಂತಾಗ, ಜನರ ಹಿತ ಕಡೆಗಣಿಸಿದಾಗ, ಪಕ್ಷದ ಒಳಗಿದ್ದು ರಾಜಕೀಯ ವ್ಯಭಿಚಾರ ಆರೋಪ ಎದುರಿಸುವುದಕ್ಕಿಂತ ರಾಜೀನಾಮೆ ಕೊಟ್ಟು ಹೊರ ಬರುವುದು ರಾಜಮಾರ್ಗ ಎಂದು ಅನರ್ಹರ ರಾಜೀನಾಮೆಯನ್ನು ಅವರು ಸಮರ್ಥಿಸಿಕೊಂಡರು.

 ಜೆಡಿಎಸ್ ನ ಚಲಯವರಾಯ ಸ್ವಾಮಿ,ಅಖಂಡ‌ ಶ್ರೀನಿವಾಸಮೂರ್ತಿ, ಬಾಲಕೃಷ್ಣ, ಜಮೀರ್, ರಮೇಶ್ ಬಂಡಿಸಿದ್ದೇಗೌಡ ಇತರರಿಂದ ಸಿದ್ದರಾಮಯ್ಯ ಕ್ರಾಸ್ ಓಟ್ ಮಾಡಿಸಿದ್ದು ರಾಜಕೀಯ ವ್ಯಭಿಚಾರ ಅಲ್ಲವೇ ?ಯಾವೊಬ್ಬ ಸಾಹಿತಿ,ಪ್ರಗತಿಪರರು ಅದನ್ನು ವಿರೋಧಿಸಲೇ ಇಲ್ಲ ರಾಜಕೀಯ ವ್ಯಭಿಚಾರ ಎಂದು ಕರೆಯಲೇ ಇಲ್ಲ, ಅವರು ಮಾಡಿದರ ಮಾತ್ರ ಸರಿ.ಆದರೆ ಈಗ 17 ರಲ್ಲಿ 14 ಜನ ರಾಜಮಾರ್ಗದ ಮೂಲಕ ರಾಜೀನಾಮೆ ನೀಡಿದ್ದರು ಅದರಲ್ಲೂ ಕೆಲವರು ಮಂತ್ರಿಗಳೂ ಇದ್ದರು.ಸಾವಿರ‌ ಕೋಟಿ ಘೋಷಿತ ಆಸ್ತಿ ಹೊಂದಿದವ ರೂ ಇದ್ದರು, ಇವರು ರಾಜೀನಾಮೆ ಕೊಡಲು ಕಾರಣ ಏನು ಎಂದು ತತ್ವಭ್ರಷ್ಟ ಕಾಂಗ್ರೆಸ್, ಜೆಡಿಎಸ್ ಅರ್ಥ ಮಾಡಿಕೊಳ್ಳಬೇಕು ಎಂದರು.

 17 ಶಾಸಕರ ರಾಜೀನಾಮೆ ಕೊಟ್ಟ ಕಾರಣಕ್ಕೆ ನಮ್ಮ‌ಸರ್ಕಾರ ಬಂತು ಇದನ್ನು ನಾವು ಒಪ್ಪಿಕೊಳ್ಳುತ್ತೇವ ಆದರೆ ಅದಕ್ಕೂ ಮುನ್ನ ಜನಾದೇಶ ಎರಡೂ ಪಕ್ಷದ ವಿರುದ್ಧ ಇತ್ತು. ನಿಮಗೆ ನೈತಿಕತೆ ಇದ್ದತೆ ರಾಮಕೃಷ್ಣ ಹೆಗಡೆ ಹಾದಿ ಹಿಡಿಯುತ್ತಿದ್ದಿರಿ. ನಿರೀಕ್ಷಿತ ಸ್ಥಾನ ಗೆಲ್ಲದೇ ಇದ್ದ ನೈತಿಕ ಹೊಣೆಗಾರಿಕೆ ಹೊತ್ತು ಅಂದು ಹೆಗಡೆ ರಾಜೀನಾಮೆ ನೀಡಿದ್ದರು.ಆದರೆ ಇಂದು ತಂದೆ ಮಗ ಇಬ್ಬರೂ ಸೋತರು ಇವರಿಗೆ ನೈತಿಕತೆ ಇಲ್ಲ,ಚಾಮುಂಡೇಶ್ವರಿ ಸೋಲು ಸಿದ್ದರಾಮಯ್ಯಗೂ ನೈತಿಕತೆ ಕಾಡಲೇ ಇಲ್ಲ, ಗೌರವಯುತ ರಾಜಕಾರಣಿಯಾಗಿದ್ದರೆ ಕುಮಾರಸ್ವಾಮಿ, ಸಿದ್ದರಾಮಯ್ಯ ಸಾರ್ವಜನಿಕ ಜೀವನಕ್ಕೆ ರಾಜೀನಾಮೆ ನೀಡ ಬೇಕಿತ್ತು.ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕಾದರೂ ರಾಜೀನಾಮೆ ಕೊಟ್ಟರು ಆದರೆ ಆ ಹೀನಾಯ ಸೋಲಿನ ನಡುವೆಯೂ ಸಿಎಂ ಸ್ಥಾನ ಉಳಿಸಿಕೊಳ್ಳಲು ಕುಮಾರಸ್ವಾಮಿ, ಸಮನ್ವ ಸಮಿತಿ ಸ್ಥಾನ ,ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನ ತೊರೆಯದ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಅಂಟಿಕೊಂಡು ಕೂತಿದ್ದಾರೆ ಎಂದು ಟೀಕಿಸಿದರು.

 ಸಭ್ಯತೆಯ ಮುಖವಾಡ ಧರಿಸಿ ಇನ್ನೊಬ್ಬನಿಗೆ ಬೋಧನೆ ಮಾಡುವ ರಮೇಶ್ ಕುಮಾರ್ ಸಭ್ಯತೆ ಬಗ್ಗೆ ಅವರದ್ದೇ ಪಕ್ಷದ ಮುನಿಯಪ್ಪ ಅವರನ್ನೇ ಕೇಳಿ ರಾಜಕೀಯ ವ್ಯಭಿಚಾರ ಅಂದರೆ ಏನು ಎನ್ನುವುದನ್ನು ಅವರು ಹೇಳಬಲ್ಲರು. ರಾಜಕೀಯದ ಹೊಸ ಭಾಷ್ಯವನ್ನು ರಮೇಶ್ ಕುಮಾರ್ ಅವರಿಂದ ಬರೆಸಬಹುದು ಎಂದು ವ್ಯಂಗ್ಯವಾಡಿದರು.

 ಮಾತೆತ್ತಿದರೆ ಪಕ್ಷಾಂತರಿಗಳಿಗೆ ಬುದ್ದಿ ಕಲಿಸಿ ಎನ್ನುತ್ತಿದ್ದಾರೆ ರಮೇಶ್ ಕುಮಾರ್,ಸಿದ್ದರಾಮಯ್ಯ ಕೂಡ ಪಕ್ಷಾಂತರ ಮಾಡಿದವರೇ?ಈಗ 2023ಕ್ಕೆ ಹೊಸ ಇನ್ನಿಂಗ್ಸ್ ಆಡಬೇಕೇ ಹೊರತ ಅದಕ್ಕೂ ಮುನ್ನ ಅವಕಾಶ ಸಿಗುವುತ್ತದೆ ಎನ್ನುವುದು ಭ್ರಮೆ ಎಂದು ಮಧ್ಯಂತರ ಚುನಾವಣೆ ಸಾಧ್ಯತೆ ತಳ್ಳಿಹಾಕಿದರು.

 ಮನೆ ಖಾಲಿ ಮಾಡದೇ ಇರುವವರು,ಬೇರೆಯವರ ಹೆಸರಿನ ಮನೆಯಲ್ಲಿ ಇರುವವರು ದೊಡ್ಡ ಜನರಾಗಿದ್ದಾರೆ,ರಾಮನಗರ ಬಿಜೆಪಿ ಅಭ್ಯರ್ಥಿ ನಿವೃತ್ತಿ ಮಾಡಿದವರೂ ದೊಡ್ಡ ಜನರಾಗಿದ್ದಾರೆ.ಪ್ರತಿಪಕ್ಷ ಶಾಸಕಾಂಗ ಪಕ್ಷದ ನಾಯಕರಲ್ಲದೇ ವಿಧಾನಸೌಧದಲ್ಲಿ ಕಚೇರಿ‌ ಕೊಟ್ಟಿದ್ದರು.ಅವರಲ್ಲಾ ದೊಡ್ಡ ಜನರಾಗಿದ್ದಾರೆ ಎಂದು ಕುಹಕವಾಡಿದರು.

 ನಾಯಕರು ಹೀಗೇ ಮಾತಾಡುತ್ತಾರೆ ಎಂದು ಜನ ಊಹೆ ಮಾಡುತ್ತಾರೆ ಹಾಗಾಗಿ ರೋಚಕತೆ ಇಲ್ಲ, ಇವರೆಲ್ಲಾ ಅಧಿಕಾರ ಇದ್ದಾಗ ಹೇಗೆ,ಇಲ್ಲದಾಗ ಹೇಗೆ, ಚುನಾವಣೆ ಬಂದಾಗ ಹೇಗೆ ಎಂದು‌ ಜನರಿಗೆ ಗೊತ್ತು ಹಾಗಾಗಿ ಅವರ ಸಿನಿಮಾ‌,ಟ್ರೈಲರ್ ಓಡುವುದಿಲ್ಲ.105 ಸ್ಥಾನ ಬಿಜೆಪಿಗೆ ಇದ್ದು 15 ಬಂದರೆ 120 ಆಗಲಿದೆ ಹಾಗಾದಾಗ ಸ್ಥಿರ ಸರ್ಕಾರ ಕೊಡಲು‌ ಸಾಧ್ಯ, ಕಿಚಡಿ ಸರ್ಕಾರಕ್ಕಿಂತ ಸ್ಥಿರ ಸರ್ಕಾರ‌ ರಾಜ್ಯಕ್ಕೆ‌ ಒಳ್ಳೆಯದು ಎಂದು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

 ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ,ಶಿವಸೇನೆ ಮೈತ್ರಿಗೆ ಸರಳ ಬಹುಮತ ಬಂದಿತ್ತು, ಹಿಂದುತ್ವ ಹೇಳುವ ಬಿಜೆಪಿ ಮೃದು ಹಿಂದಿತ್ವವಾದಿಯಾದರೆ, ಭಯಂಕರ ಹಿಂದುತ್ವ ಹೊಂದಿದ್ದ ಶಿವಸೇನೆ ಈಗ ಜಾತ್ಯತೀತವಾದಿಯಾಗಿದೆ.ಕರ್ನಾಟಕದಲ್ಲಿ ಜಾತ್ಯತೀತ ಹೆಸರಿನ ಪಕ್ಷ 15 ತಿಂಗಳಲ್ಲಿ‌ ಜನರ ನಗೆಪಾಠಲಿಗೆ ಗುರಿಯಾಗಿತ್ತು, ಈಗ ಅಲ್ಲಿ ಏನಾಗಲಿದೆ ನೋಡೋಣ, ಕರ್ನಾಟಕದಲ್ಲಿ ಆಗಿದ್ದೇ ಮಹಾರಾಷ್ಟ್ರದಲ್ಲೂ ಆಗಲಿದೆ.ಕೆಲಕಾಲ ಅಧಿಕಾರ ಇಲ್ಲದಿರ ಬಹುದು ಆದರೆ ಈಗ ಇದ್ದ ಪಾಲುಭೌಮತ್ವ ಹೋಗಿ ಅಧಿಕಾರದ ಸಾರ್ವಭೌಮತ್ವ ಬರಲಿದೆ ಎಂದು ಕರ್ನಾಟಕದ ರೀತಿ ಮಹಾರಾಷ್ಟ್ರದಲ್ಲಿಯೂ ಮುಂದಿನ ದಿನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.