ಪ್ರತಿರೋಧ ಸಂಘರ್ಷಕ್ಕೆ ಕೊನೆಯಿಲ್ಲ : ಡಾ. ಜೆ.ಎಸ್‌. ಪಾಟೀಲ್

ಪ್ರತಿರೋಧ ಸಂಘರ್ಷಕ್ಕೆ ಕೊನೆಯಿಲ್ಲ : ಡಾ. ಜೆ.ಎಸ್‌. ಪಾಟೀಲ್ There is no end to the resistance conflict: Dr. J.S. Patil

ಹೊಸಪೇಟೆ 10: ಪ್ರಸ್ತುತ ದಿನಗಳಲ್ಲಿ ಕೆಲವರು ನಮ್ಮ ನೆಲಮೂಲದ ಸಂಸ್ಕೃತಿಯನ್ನು ತಿರುಚಿ, ಇತಿಹಾಸವನ್ನು ಬದಲಿಸುವ ಉನ್ನಾರ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ವಿಜಯಪುರ ಚಿಂತಕರಾದ ಡಾ.ಜೆ.ಎಸ್‌. ಪಾಟೀಲ್ ವಿಷಾದ ವ್ಯಕ್ತಪಡಿಸಿದರು. 

ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠವು ಭುವನ ವಿಜಯ ಸಭಾಂಗಣದಲ್ಲಿ ಆಯೋಜಿಸಿದ್ದ 2569ನೇ ಭಗವಾನ್ ಗೌತಮ ಬುದ್ಧ, 151ನೇ ಶಾಹು ಮಹಾರಾಜ ಹಾಗೂ 141 ನೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಸಮಕಾಲೀನ ಸಂದರ್ಭದಲ್ಲಿ ಬುದ್ಧ ಹಾಗೂ ಅವರ ಚಿಂತನೆಗಳ ಅವಶ್ಯಕತೆ ಎನ್ನುವ ಉಪನ್ಯಾಸ ನೀಡುತ್ತಾ ಮಾತನಾಡಿದರು. ಪ್ರತಿರೋಧ ಸಂಘರ್ಷದ ಚಳುವಳಿಗಳು ಅನಾದಿಕಾಲದಿಂದಲೂ ಬಂದಿರುವ ಸಂಸ್ಕೃತಿಯಾಗಿದ್ದು, ಇವತ್ತು ಈ ಪರಂಪರೆ ಮುಂದುವರೆಯುತ್ತಿರುವುದು ಶೋಚನೀಯ. ಇನ್ನು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವತಂತ್ರ ಚಳುವಳಿಯನ್ನ ಸ್ವತಂತ್ರ ಚಳುವಳಿ ಎಂದು ಭಾವಿಸಲಾಗಿದೆ. 3500 ವರ್ಷಗಳ ಹಿಂದೆ ಮೊದಲು ಆರ್ಯ ದ್ರಾವಿಡರ ನಡುವಿನ ಸಂಘರ್ಷ, ಎರಡನೆಯದಾಗಿ ವೈದಿಕ ಸಂಸ್ಕೃತಿಯ ವಿರುದ್ಧ ಹೋರಾಡಿದ ಬುದ್ಧ ಮತ್ತು ಮಹಾವೀರರ ಚಳುವಳಿ, ಮೂರನೆಯದಾಗಿ ವೈದಿಕ ಧರ್ಮದ ಪುನರುತ್ಥಾನ ಮತ್ತು ಬಹುಜನರ ಶೋಷಣೆ ವಿರುದ್ಧ ಬಸವಣ್ಣನವರ ಹೋರಾಟ ಹಾಗೂ ನಾಲ್ಕನೆಯದಾಗಿ ಬ್ರಿಟಿಷರ ವಿರುದ್ಧ ಹೋರಾಟ ಸ್ವತಂತ್ರ ಚಳುವಳಿಗಳು ನಮ್ಮ ನೆಲ ಪ್ರತಿರೋಧ ಚಳುವಳಿಗಳಾಗಿವೆ. ಪ್ರಮುಖವಾಗಿ ಈ ಸಮಯದಲ್ಲಿ ಮುಸ್ಲಿಂ ಸಾಮ್ರಾಜ್ಯಗಳು 700 ರಿಂದ 800 ವರ್ಷಗಳ ಕಾಲ ಆಡಳಿತ ನಡೆಸಿದರು,  ಮುಸ್ಲಿಮರ ಸಾಮ್ರಾಜ್ಯದ ಆಡಳಿತ ವಿರುದ್ಧ ಯಾವುದೇ ಚಳುವಳಿಗಳು ಕಂಡುಬರುವುದಿಲ್ಲ, ಏಕೆಂದರೆ ಅಂದು ಆಡಳಿತದಲ್ಲಿದ್ದ ಕೆಲವರು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಂಡು, ಈ ನೆಲವನ್ನು ಪರಕೀಯರಿಗೆ ಅಡವಿಟ್ಟಿದ್ದರು. ಈ ಸತ್ಯವನ್ನು ಗೊತ್ತಾಗಬಾರದೆಂದು ಮೊಘಲರ ಇತಿಹಾಸವನ್ನು ಕಲಿಸಬಾರದು ಎಂದು ಕೆಲ ರಾಷ್ಟ್ರೀಯ ವಾದಿಗಳು ಮಾತನಾಡುತ್ತಿರುವುದು ಸೋಜಿಗದ ಸಂಗತಿ. ಪ್ರಸ್ತುತ ದಿನಗಳಲ್ಲಿ ಯುವಕರು ಬುದ್ಧನ ಚಿಂತನೆಗಳನ್ನು ತಮ್ಮಲ್ಲಿ ರೂಢಿಸಿಕೊಂಡು ಸಾಮಾಜಿಕ ಪಿಡುಗುಗಳ ವಿರುದ್ಧ ಪ್ರತಿರೋಧ ಒಡ್ಡುವ ಕೆಲಸ ಮಾಡಬೇಕೆಂದು ತಿಳಿಸಿದರು. 

ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಪ್ರೊ. ಎನ್‌. ಚಿನ್ನಸ್ವಾಮಿ ಸೋಸಲೆ ಅವರು ಶಾಹು ಮಹಾರಾಜ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಪ್ರಭುತ್ವ ಮತ್ತು ಜನತೆ ಎನ್ನುವ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು ಆಧುನಿಕ ಅಂಬೇಡ್ಕರನ್ನಾಗಿ ರೂಪಿಸಿದವರಲ್ಲಿ ಶಾಹುಮಹಾರಾಜರು ಕೂಡ ಒಬ್ಬರು, ತಮ್ಮ ಸಂಸ್ಥಾನದಲ್ಲಿ ತಾವೇ ಮೊದಲ ಪ್ರಜೆಯಾಗಿ ನಡೆದುಕೊಂಡವರು. ಇನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಸ್ಥಾನದಲ್ಲಿ ಪಂಚಮ ಶಾಲೆಗಳನ್ನು ತೆರೆದು,  ಶಿಕ್ಷಣದ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದರು. ಆದರೆ ಕೆಲವರು ಧರ್ಮದ ಆಧಾರ ಮೇಲೆ ಇತಿಹಾಸದ ಅವರ ಹೆಸರು ಉತ್ತುಂಗದಲ್ಲಿದೆ. ಆದರೆ ಸಮಾಜದ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಶಾಹು ಮಹಾರಾಜ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಣ್ಮರೆಯಾಗುತ್ತಿರುವುದು ನಾವು ಕಾಣಬಹುದು ಎಂದು ತಿಳಿಸಿದರು. 

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ವಿಜಯ್ ಪೂಣಚ್ಚ ತಂಬಂಡ ಅವರು ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಶೋಷಣೆ ಅವಧಿ ಹೆಚ್ಚಾಗುತ್ತಿದ್ದು, ಎಲ್ಲೇ ಹೋದರು ದಲಿತರು ಇದಕ್ಕೆ ಬಲಿಯಾಗುತ್ತಿದ್ದಾರೆ. ಪ್ರಜ್ಞಾವಂತ ನಾವುಗಳು ಏನು ಮಾಡುತ್ತಿದ್ದೇವೆಂದು ಪ್ರಶ್ನಿಸಿದರು. 

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತನಾಡುತ್ತಾ, ಗೌತಮ ಬುದ್ಧ ಹಾಗೂ ಬಸವದಿ ಶರಣರು ಭಾರತದಲ್ಲಿ ಜನಿಸಿರುವುದು ನಮ್ಮ ಪುಣ್ಯ. ಇವರು ಇಲ್ಲದಿದ್ದರೆ ಇಂದು ನಾವು ಯಾವ ದಿಕ್ಕಿನಲ್ಲಿ ನಡೆಯುತ್ತಿದ್ದೇವೆ ಎಂದು ಚಿಂತಿಸಬೇಕಾಗುತ್ತದೆ. ಈ ಮಹನೀಯರು ತಮ್ಮ ಶಕ್ತಿಮೀರಿ ಸಮಾಜದ ಒಳಿತಿಗಾಗಿ ಶ್ರಮಿಸಿದವರು. ಇವರ ಆಲೋಚನೆ ಮತ್ತು ತತ್ವದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕಾಗಿದೆ. ಇಂದು ಒಳ ಮೀಸಲಾತಿಯ ಕುರಿತು ತುಂಬಾ ಚರ್ಚೆಗಳು ನಡೆಯುತ್ತಿದ್ದು, ಆರ್ಥಿಕ ದೃಷ್ಟಿಯಿಂದ ನೋಡಿದರೆ ಬೇಡ ಎಂದು ವ್ಯಕ್ತವಾಗುತ್ತದೆ. ಆದರೆ ಸಾಮಾಜಿಕ ದೃಷ್ಟಿಕೋನದಿಂದ ನೋಡಿದಾಗ ಒಳ ಮೀಸಲಾತಿ ಅಗತ್ಯತೆ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ನುಡಿದರು.   

ಪ್ರೊ. ಪಿ. ಮಹಾದೇವಯ್ಯ, ಹಿರಿಯ ಪ್ರಾಧ್ಯಾಪಕರು ಪ್ರಾಸ್ತಾವಿಕವಾಗಿ ಮಾತನಾಡಿ ಹಾಗೂ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.