ಕಲಾವಿದರಿಗೆ, ವೈದ್ಯರಿಗೆ, ಶಿಕ್ಷಕರಿಗೆ ಜಾತಿ ಇಲ್ಲ: ಮಣ್ಣೂರ

ಧಾರವಾಡ 20: ಒಳ್ಳೆಯ ಕಲಾವಿದರಿಗೆ, ವೈದ್ಯರಿಗೆ, ಶಿಕ್ಷಕರಿಗೆ ಜಾತಿ ಇಲ್ಲ ಎಂದು ಖ್ಯಾತ ನಾಟಕಕಾರರು ಹಾಗೂ ಹುಬ್ಬಳ್ಳಿ ಸಿದ್ಧಾರೂಢಮಠ ಟ್ರಸ್ಟ್ ಧರ್ಮದರ್ಶಿ  ಡಾ. ಗೋವಿಂದ ಮಣ್ಣೂರ ಅಭಿಪ್ರಾಯಪಟ್ಟರು. 

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸಂಪಿಗೆ ತೋಂಟದಾರ್ಯ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ``ವೃತ್ತಿ ರಂಗಭೂಮಿಯ ಸಮಸ್ಯೆಗಳು' ವಿಷಯ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು 1890 ರ ದಶಕದಲ್ಲಿ  ಮರಾಠಿ ರಂಗಭೂಮಿಯ ಪ್ರಭಾವ ಕರ್ನಾಟಕದಲ್ಲಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಸಕ್ಕರಿ ಬಾಳಾಚಾರ್ಯರಂಥ ನಾಟಕಕಾರರು ಹಟಕ್ಕೆ ಬಿದ್ದು ಕನ್ನಡ ರಂಗಭೂಮಿಯನ್ನು ಕಟ್ಟಿದರು. ಆದರೆ ಇವತ್ತಿನ ಸಂದರ್ಭದಲ್ಲಿ ಟಿ. ವಿ. ಸಿನೇಮಾ ಮಾದ್ಯಮಗಳಿಗೆ ಮಾರುಹೋಗಿ ವೃತ್ತಿ ರಂಗಭೂಮಿಯ ಉತ್ತಮ ನಟ, ನಟಿಯರು ರಾಜಧಾನಿ ಸೇರುತ್ತಿದ್ದಾರೆ ಎಂದರು. 

ಉಪಜೀವನಕ್ಕೆ ಆದಾಯದ ಕೊರತೆ ಇದ್ದು ಮಕ್ಕಳ ಶಿಕ್ಷಣ ಮತ್ತು ಭವಿಷ್ಯದತ್ತ ಚಿಂತಿತರಾಗಿರುವ ಸಂದರ್ಭ ಇದ್ದು ಸರಕಾರ ಕೂಡಲೇ ಇಂತಹ ಕಂಪನಿಗಳನ್ನು ಕಲಾವಿದರಿಗೆ ಧನಸಹಾಯ ನೀಡುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.  ಈಗ ನೀಡುತ್ತಿರುವ ಮಾಶಾಸನದ ವಯಸ್ಸು 50 ರಿಂದ 55 ಮಾಡಬೇಕು ಅಂದರೆ ಕಲಾವಿದರಿಗೆ ಅನುಕೂಲವಾಗುತ್ತದೆ, ಅಂದಾಗ  ಕಲಾವಿದರಿಗೆ, ಕಂಪನಿಗಳಿಗೆ ಸರ್ಕಾರ  ಗೌರವ ನೀಡಿದಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಕಲಾವಿದೆ ನಿವೃತ್ತ ಶಿಕ್ಷಕಿ ವಿಷಯಾ ಜೇವೂರ ಮಾತನಾಡಿ, ವೃತ್ತಿ ರಂಗಭೂಮಿಯ ಕಲಾವಿದರೆ ಪ್ರತಿಭಾವಂತರು. ಅವರ ನಟನೆ ಮತ್ತು ಮಾತುಗಾರಿಕೆಯಿಂದ ಪ್ರೇಕ್ಷಕರ ಮನಗೆದ್ದು, ಕಷ್ಟದಲ್ಲಿದ್ದರೂ ರಂಗದ ಮೇಲೆ ನಟನೆಯ ಮೂಲಕ ತಮ್ಮ ಶ್ರೀಮಂತಿಕೆ ಮೆರೆಯುತ್ತಾರೆ ಎಂದರು. ಅವರಿಗೆ ಪ್ರಚಾರವಿಲ್ಲ. ಪ್ರಾಮಾಣಿಕವಾಗಿ ನಟನೆ ಮಾಡಿ ಜನರ ಮೆಚ್ಚುಗೆ ಪಡೆಯುವ ಮುಗ್ಧ ಕಲಾವಿದರು, ಸಮಾಜ, ಸಂಘಟನೆಗಳು, ಸರಕಾರ ವೃತ್ತಿರಂಗಭೂಮಿ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಿ ಅವರನ್ನು ಮೇಲೆತ್ತಿದರೆ ನಮ್ಮ ರಂಗಭೂಮಿ ಶ್ರೀಮಂತವಾಗುತ್ತದೆ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಉಪಸ್ಥಿತರಿದ್ದರು. ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ  ಪ್ರಕಾಶ ಎಸ್.ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ  ಸದಾನಂದ ಶಿವಳ್ಳಿ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. 

ಹರ್ಷ ಡಂಬಳ, ಶಿ. ಮ. ರಾಚಯ್ಯನವರ, ಗಿರಿಜಾ ಹಿರೇಮಠ, ನಂದಾ ಗುಳೆದಗುಡ್ಡ, ಆರತಿ ದೇವಶಿಖಾಮಣಿ, ರಾಮಚಂದ್ರ ಧೋಂಗಡೆ, ಎಂ. ಬಿ. ಹೆಗ್ಗೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.