ಎಲ್ಲರನ್ನು ಸೆಳೆವ ಮಾಂತ್ರಿಕ ಶಕ್ತಿ ನಗೆಯಲ್ಲಿದೆ: ಆನಂದ ಭಿಂಗೆ

ಬೆಳಗಾವಿ 09: ನಗು ನಗುತ ಸ್ವಾಗತಿಸುವ ಗುಣವನ್ನು ಬೆಳಿಸಿಕೊಳ್ಳಬೇಕು. ನಗುಮುಖದವರಿಂದ ಎಂಥ ಕಠಿಣ ಕೆಲಸಗಳೂ ಸುರಳಿತವಾಗುತ್ತವೆ. ಆದ್ದರಿಂದ ಹಾಸ್ಯ ಮನೋಭಾವವನ್ನು ಬೆಳೆಸಿಕೊಳಿ.್ಳ ನಗೆಯಲ್ಲಿ ಎಲ್ಲರನೂ ಸೆಳೆಯುವ ಮಾಂತ್ರಿಕ ಶಕ್ತಿಯಿದೆ ಎಂದು ಖಾನಾಪೂರ ಖ್ಯಾತ ನಗೆಮಾತುಗಾರ ಆನಂದ ಭಿಂಗೆ ಇಂದಿಲ್ಲಿ ಹೇಳಿದರು.

 ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 8 ಶನಿವಾರದಂದು ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ  ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ 'ಯುವನಗೆ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.

ನನ್ನ ಮಾತೃಭಾಷೆ ಮರಾಠಿಯಾದರೂ ನನಗೆ ಕನ್ನಡವೆಂದರೆ  ಇಷ್ಟ.  ಅಚ್ಚ ಕನ್ನಡದಲ್ಲಿ ಮಾತನಾಡುತ್ತೇನೆ. ಕನ್ನಡ ಭಾಷೆಯಲ್ಲಿಯೇ ನೂರಾರು  ಹಾಸ್ಯಕಾರ್ಯಕ್ರಮಗಳನ್ನ  ಕೊಟ್ಟಿದ್ದೇನೆ. ಜನರು ನನ್ನನ್ನು  ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಕಲಾವಿದನಿಗೆ ಭಾಷೆಯೆಂದೂ ಅಡ್ಡಗೋಡೆಯಾಗಲಾರದು ಎಂದು ಹೇಳಿ ಹಲವಾರು ನಗೆ ಪ್ರಸಂಗಗಳನ್ನು ಹಂಚಿಕೊಂಡರು. 

ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಎಂ. ಎಸ್. ಇಂಚಲ ಅವರು ಮಾತನಾಡುತ್ತ  "ಖಾನಾಪುರದ  ಆನಂದ ಭಿಂಗೆಯವನರನು ಕಲಿಯುಗದ ಹಾಸ್ಯಭೀಮ ಎಂದು ಪ್ರೀತಿಯಿಂದ ಕರೆಯುತ್ತೇನೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಉದ್ದೇಶದಿಂದಲೇ ಯುವನಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಹಾಸ್ಯ ಕಲಾವಿದ ರಾಜು ಹಿರೇಮಠ ಹಾಗೂ ಕೆ. ತಾನಾಜಿ ತಮ್ಮಲ್ಲಿರುವ ಪ್ರತಿಭೆಯನ್ನು ಬಳೆಸಿಕೊಂಡು ರಾಜ್ಯ ಮಟ್ಟದಲ್ಲಿ ಬೆಳೆಯುವಂತಾಗಲಿ ಎಂದು ಹಾರೈಸಿದರು.

ಪ್ರಾಯೋಜಕತ್ವವನ್ನು  ವಹಿಸಿದ್ದ  ಸ್ಟೇಟ್ ಬ್ಯಾಂಕ್ ಆಫ್ ಮಹಾರಾಷ್ಟ್ರ ನಿವೃತ್ತಿ ಹೊಂದಿರುವ  ಅರವಿಂದ ಹುನಗುಂದ ಮಾತನಾಡಿ ಒಂದರ್ಥದಲ್ಲಿ ಬ್ಯಾಂಕ ಹಾಗೂ ನಗು ಎರಡೂ ವಿರುದ್ದಾರ್ಥಕ ಶಬ್ಧಗಳಿದ್ದಂತೆ.  ಬ್ಯಾಂಕಿನವರ ಮುಖದಲ್ಲಿ ನಗು ಹುಡುಕಿದರೂ  ಸಿಗದು. ಅದಕ್ಕೆ ಕವಿ ಡುಂಡಿರಾಜ್ ಅಪವಾದವಾಗಿದ್ದಾರೆ.  ಬ್ಯಾಂಕ್ ನಲ್ಲಿದ್ದರೂ ಒಳ್ಳೆಯ ಹಾಸ್ಯ ಬಾಷಣಕಾರರು ಹಾಗೂ ಲೇಖಕರು ಎಂದು ಹೇಳಿ ಬ್ಯಾಂಕಿನಲ್ಲಿ ನಡೆಯುವ ನಗೆ ಪ್ರಸಂಗಗಳನ್ನು  ಹಂಚಿಕೊಂಡರು.

ಚಾಲನೆ ನೀಡಿದ ಅಂಕಣ ಬರಹಗಾರ ಸಿ. ಜಿ. ಮುನವಳ್ಳಿಯವರು ಮಾತನಾಡುತ್ತ  ಸರಳ ಸುಂದರ ಭಾಷೆ ಕನ್ನಡ. ಅತ್ಯಂತ ಕಡಿಮೆ ಶಬ್ಧಗಳಲ್ಲಿ ಹೆಚ್ಚಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಎಂದು ಹೇಳಿ ದಿನನಿತ್ಯ ನಡೆಯುವ ನಗೆಪ್ರಸಂಗಗಳನ್ನು ಹಂಚಿಕೊಂಡರು.

ಬೈಲಹೊಂಗಲದ ಎಂ. ಬಿ. ಹೊಸಳ್ಳಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯುವನಗೆ ಮಾತುಗಾರರಾದ ಯಮಕನಮರಡಿಯ ರಾಜು ಹಿರೇಮಠ  ಹಾಗೂ  ಕೆ. ತಾನಾಜಿಯವರು ತಮ್ಮ ಮಾತುಗಳಿಂದ ಜನರನ್ನು ರಂಜಿಸಿದರು.

ಜಯಶ್ರೀ ನಿರಾಕಾರಿ, ಸುನಿತಾ ಪಾಟೀಲ ಕೊಲ್ಲಾಪೂರೆ, ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅಶೋಕ ಮಳಗಲಿ ನಿರೂಪಿಸಿದರು.