ಜಾಗತೀಕರಣದ ಜಗತ್ತಿನಲ್ಲಿ ಅಂತಃಕರಣದ ಅವಶ್ಯಕತೆ ಇದೆ: ಡಾ. ಶರಣಮ್ಮ ಗೊರೆಬಾಳ
There is a need for empathy in a globalized world: Dr. Sharanamma Gorebala
ಸವದತ್ತಿ 19: ಇಂದಿನ ಜಾಗತೀಕರಣದ ಜಗತ್ತಿನಲ್ಲಿ ಅಂತಃಕರಣ ಮರೆಯಾಗುತ್ತಿದೆ. ಪ್ರತಿಯೊಬ್ಬರೂ ಪರಸ್ಪರ ಮಾನವೀಯ ನೆಲೆಯ ದೃಷ್ಟಿಕೋನವನ್ನು ಹೊಂದಿ ಅಂತಃಕರಣವುಳ್ಳವರಾದಾಗ ಮಾತ್ರ ಒಂದು ಉತ್ತಮ ಸಮಾಜವನ್ನು ರೂಪಿಸಲು ಸಾಧ್ಯ ಎಂದು ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಶರಣಮ್ಮ ಗೊರೆಬಾಳ ಹೇಳಿದರು.
ಇಲ್ಲಿನ ಕೆ. ಎಲ್. ಇ. ಸಂಸ್ಥೆಯ ಎಸ್. ವಿ. ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2025-26ನೆಯ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಸಿಗುವ ಪ್ರತಿಯೊಂದು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಧನೆಗೆ ಭಾಷೆ, ಬಡತನ, ಹಣೆಬರಹ ಹಾಗೂ ಕೀಳರಿಮೆಯ ನೆಪಗಳು ಎಂದಿಗೂ ಅಡ್ಡಿಯಾಗಬಾರದು.
ಸವಾಲುಗಳನ್ನು ಎದುರಿಸಿ ಸತತವಾಗಿ ಪ್ರಯತ್ನಿಸುವುದೇ ಸಾಧನೆಯ ಅಂತಿಮ ಗುರಿಯಾಗಿದೆ ಎಂದರು. ಉಪ್ಪು, ಆಲಿಕಲ್ಲು ಮತ್ತು ಮುತ್ತು ಇವೆಲ್ಲವೂ ನೀರಿನಲ್ಲೇ ಹುಟ್ಟಿದರೂ, ಉಪ್ಪು ಮತ್ತು ಆಲಿಕಲ್ಲು ಕರಗಿ ಹೋಗುತ್ತವೆ. ಆದರೆ ಮುತ್ತು ಮಾತ್ರ ಎಂದಿಗೂ ಕರಗದೆ ತನ್ನ ಸೌಂದರ್ಯ ಮತ್ತು ಮೌಲ್ಯವನ್ನು ಕಾಯ್ದುಕೊಳ್ಳುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಕೂಡ ಮುತ್ತಿನಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ಸಮಗ್ರ ಸಾಧನೆ ತೋರಿದ ರವಿ ಹೊಳೆಯಣ್ಣವರ, ಮಧು ಶಿರಕೋಳ, ಸಹನಾ ಬಾರ್ಕಿ ಮತ್ತು ಜಾವೆದ್ ನದಾಫ್ ಅವರಿಗೆ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.
ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾದ ಜಾವೆದ್ ನದಾಫ್, ಸರಸ್ವತಿ ಮಾದರ, ವಿಜಯ್ ಗಳಗಿನ್, ನಾಗರಾಜ ಗುಡಗಾರ, ಲಕ್ಷೀ ದೇಸಾಯರ, ಪುಷ್ಪಾ ವಟ್ನಾಳ, ಪ್ರಿಯಾಂಕ ಭೋವಿ ಅವರಿಗೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿ ತಂದ ಚೈತ್ರಾ ಶೆಟ್ಟೆಪ್ಪನವರ ಮತ್ತು ಜ್ಯೋತಿ ಬಾನಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎನ್. ಆರ್. ಸವತೀಕರ, ಡಾ. ಎ. ಎಫ್, ಬದಾಮಿ, ಉಮೇಶ್ ಬಾಳಿ, ಐಶ್ವರ್ಯ ಗುಡೆನವರ, ಪ್ರೊ. ಕೆ. ರಾಮರೆಡ್ಡಿ, ಪ್ರೊ. ಶಿವಾನಂದ ಎಂ. ಹೊಳಿ, ಬಿ. ಸಿ. ಕಿರಣ ಲಮಾಣಿ, ಪ್ರೊ. ವಿ. ಎಸ್. ಮೀಶಿ, ಡಾ. ಎನ್. ಎ. ಕೌಜಗೇರಿ, ಎ. ಆರ್. ಹಳ್ಳೂರ, ಮೋಹನ್, ಎಮ್. ಎನ್. ಸಂಗೊಳ್ಳಿ, ಪಿ. ಎಫ್. ಹಾದಿಮನಿ, ಸ್ನೇಹಾ ಗಂಗಲ ಹಾಗೂ ಭಾಗ್ಯಶ್ರೀ ಪೊಲೇಶಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 