ಟ್ರಾನ್ಸ್ ಜೆಂಡರ್ ಪಾತ್ರದಲ್ಲಿ ನಟಿಸಬೇಕೆಂಬ ಆಸೆಯಿದೆ; ರಜನೀ ಕಾಂತ್

ಮುಂಬೈ, ಡಿ 17:         ಟ್ರಾನ್ಸ್ ಜೆಂಡರ್  ಪಾತ್ರದಲ್ಲಿ  ನಟಿಸಬೇಕು ಎಂಬ ತಮ್ಮ ಬಹುದಿನಗಳ  ಆಸೆಯನ್ನು  ತಮಿಳು   ಸೂಪರ್ ಸ್ಟಾರ್ ರಜನೀಕಾಂತ್  ಬಹಿರಂಗಪಡಿಸಿದ್ದಾರೆ. 

ಮುಂಬೈನಲ್ಲಿ ಸೋಮವಾರ  ತಮ್ಮ ಹೊಸ ಚಿತ್ರ   'ದರ್ಬಾರ್' ನ   ಟ್ರೇಲರ್   ಬಿಡುಗಡೆ ಕಾರ್ಯಕ್ರಮದಲ್ಲಿ   ಪಾಲ್ಗೊಂಡಿದ್ದರು.   ಈ ಸಂದರ್ಭದಲ್ಲಿ    ನೀವು  ಇನ್ನೂ  ನಟಿಸಬೇಕು ಎಂದು ಕೊಂಡಿರುವ  ಯಾವುದಾದರೂ ಪಾತ್ರಗಳು  ಇವೆಯೇ?   ಎಂಬ    ಪತ್ರಕರ್ತರ  ಪ್ರಶ್ನೆಗೆ     ನಾನು ಈವರೆಗೆ 160   ಚಿತ್ರಗಳಲ್ಲಿ ನಟಿಸಿದ್ದೇನೆ. ಸಿನಿ ಉದ್ಯಮ ಪ್ರವೇಶಿಸಿ  45 ವರ್ಷಗಳಾಗಿವೆ. ನನಗೆ  ಟ್ರಾನ್ಸ್ ಜೆಂಡರ್  ಪಾತ್ರದಲ್ಲಿ  ಕಾಣಿಸಿಕೊಳ್ಳಬೇಕು   ಎಂಬ ಆಸೆಯಿದೆ ಎಂದು   ಬಹಿರಂಗಪಡಿಸಿದರು.  ಯಾರಾದರೂ  ನಿರ್ದೇಶಕರು  ಟ್ರಾನ್ಸ್ ಜೆಂಡರ್  ಪಾತ್ರದಲ್ಲಿ  ನಟಿಸಲು  ನಿಮ್ಮನ್ನು ಸಂಪರ್ಕಿಸಿದ್ದಾರೆಯೇ ..? ಎಂದು ಪತ್ರಕರ್ತರ  ಮರು  ಪ್ರಶ್ನೆಗೆ,  ಯಾರು ನನ್ನನ್ನು  ಈವರೆಗೆ ಸಂಪರ್ಕಿಸಿಲ್ಲ, ಇದೇ ಮೊದಲ ಬಾರಿ  ನನ್ನ ಆಸೆ  ಹೇಳಿಕೊಂಡಿದ್ದೇನೆ ಎಂದರು. 

ಆದೇ ರೀತಿ    ಕಳೆದ 45 ವರ್ಷಗಳಿಂದ ಮರಾಠಿ ಚಿತ್ರಗಳಲ್ಲಿ   ನಟಿಸಬೇಕೆಂಬ ಆಸೆಯಿದೆ.    ನಟಿಸುವಂತೆ  ಅವಕಾಶಗಳು ಬಂದರೂ, ಕೆಲ ಕಾರಣಗಳಿಂದಾಗಿ  ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.  ಅವಕಾಶ ಬಂದರೆ  ಖಂಡಿತ ಮರಾಠಿ ಚಿತ್ರಗಳಲ್ಲಿ  ನಟಿಸುವುದಾಗಿ   ರಜನಿ ಹೇಳಿದರು.  

ದರ್ಬಾರ್  ಚಿತ್ರದಲ್ಲಿ   ಬೆಂಗಳೂರಿನ ಮರಾಠಿ ಕುಟುಂಬದಿಂದ  ಬಂದು ಮುಂಬೈ ಪೊಲೀಸ್  ಕಮೀಷನರ್  ಆಗುವ  ಪಾತ್ರದಲ್ಲಿ ರಜಿನಿಕಾಂತ್  ನಟಿಸಲಿದ್ದಾರೆ. ಈ ಚಿತ್ರದಲ್ಲಿ   ತಮ್ಮ ಪಾತ್ರವನ್ನು  ವಿವರಿಸಿದ ಅವರು, "ನಾನು ಗಂಭೀರವಾದ ಪೊಲೀಸ್ ಅಧಿಕಾರಿಯಾಗಿ ನಟಿಸುವುದಕ್ಕಿಂತ ಮನರಂಜನಾ  ಪಾತ್ರಗಳಲ್ಲಿ ಕಾಣಿಸಿಕೊಳ್ಳಲು  ಇಷ್ಟಪಡುತ್ತೇನೆ" ಎಂದು ಹೇಳಿದರು.  ಆದರೆ  ಈ ಚಿತ್ರದಲ್ಲಿ ತಮ್ಮನ್ನು  ವಿಭಿನ್ನ   ಪೊಲೀಸ್ ಅಧಿಕಾರಿಯನ್ನಾಗಿ  ತೋರಿಸಲಿದ್ದೇನೆ  ಎಂದು ನಿರ್ದೇಶಕ ಮುರುಗದಾಸ್ ಹೇಳಿದ್ದರಿಂದ  .. ಸಿನಿಮಾದಲ್ಲಿ ನಟಿಸಲು  ಒಪ್ಪಿಕೊಂಡೆ. ದರ್ಬಾರ್  ಚಿತ್ರೀಕರಣದ ಭಾಗವಾಗಿ  ಮುಂಬೈನಲ್ಲಿ  90 ದಿನ ಇರಬೇಕಾಯಿತು. ಮುಂಬೈ ಹಾಗೂ ಇಲ್ಲಿನ ಜನ  ತಮಗೆ ತುಂಬಾ ಇಷ್ಟವಾದರು ಎಂದು ರಜನಿಕಾಂತ್  ಹೇಳಿದರು.