ಬೆಂಗಳೂರು 23: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವಾಲ್ಮೀಕಿ ಹಾಗೂ ಎಸ್‌ಟಿ ಸಮುದಾಯದ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಪರ್ಯಾಯ ನಾಯಕರನ್ನು ಬೆಳೆಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀರಾಮುಲು ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮುಲು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ಆದರೆ ನನ್ನ ಆರೋಪ ಮಾಡಿ ಹೋಗೋದು ಬೇಡ, ನಾನು 40 ವರ್ಷಗಳಲ್ಲಿ ಅವರಿಗೆ ಮಾಡಿರುವ ಸಹಾಯವನ್ನು ಬೂದಿಯಲ್ಲಿ ಹಾಕಿ, ಎಲ್ಲವನ್ನು ಮರೆತು ಹೋಗುವುದಾದರೇ ಹೋಗಲಿ ಎಂದಿದ್ದಾರೆ.
ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಸಂಚು ಮಾಡಿ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ಬಳ್ಳಾರಿ ಜನ ಮಾತನಾಡಿಕೊಳ್ಳತ್ತಿದ್ದಾರೆ. ಪಕ್ಷ ಬಿಡೋದು ಅವರ ವೈಯಕ್ತಿಕ ವಿಚಾರ. ಹೋಗುವುದಾದರೆ ಅವರು ಹೋಗಲಿ. ಪಕ್ಷ ಬಿಟ್ಟು ಹೋಗುವಾಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ರೆಡ್ಡಿ ತಿರುಗೇಟು ನೀಡಿದರು.
ನಾನು ಭಗವಂತನನ್ನು ನಂಬಿದ್ದೇನೆ, ಕರ್ಮ ಯಾರನ್ನು ಬಿಡುವುದಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಷಯವನ್ನು ಸವಿಸ್ತಾರವಾಗಿ ಹೇಳುತ್ತೇನೆ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಪಕ್ಷ ಯಾರ ಪರವಾಗಿ ಕೆಲಸ ಮಾಡು ಎಂದು ಸೂಚಿಸುತ್ತದೋ ಅವರ ಪರ ಕೆಲಸ ಮಾಡುತ್ತೇನೆ, ನನಗೆ ನಾಳೆ ರಾಮುಲು ಪರವಾಗಿ ಕೆಲಸ ಮಾಡಲು ಹೇಳಿದರೆ ನಾನು ಕೆಲಸ ಮಾಡ್ತೇನೆ. ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಅಧ್ಯಕ್ಷ ಅಂತ ತಿರ್ಮಾನ ಮಾಡಿದರೆ ನಾವು ಒಪ್ಪಲೇಬೇಕು. ಮೋದಿ ಪ್ರಧಾನಿ ಅಭ್ಯರ್ಥಿ ಅಂತ ಹೇಳಿದಾಗ, ಅಡ್ವಾಣಿ ಸಹಿತ ಎಲ್ಲರೂ ಕೆಲಸ ಮಾಡಿದ್ದಾರೆ. ಹಾಗೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಅಂದ ಮೇಲೆ ನಾವು ಒಪ್ಪಬೇಕು. ಅದು ನಾಲ್ಕು ಜನರಿಗೆ ಇಷ್ಟ ಇಲ್ಲ ಅಂದ್ರೆ, ನೀವು ಅವರ ಜೊತೆಗೆ ಹೋಗಿ ನಿಂತ್ರೆ ಸರಿಯಲ್ಲ ಎಂದು ಹೇಳಿದರು.