ನವದೆಹಲಿ ,ಆ 10 ಉತ್ತರ ಕರ್ನಾಟಕದ ಪ್ರವಾಹವನ್ನು ನೋಡಿ ತಮಗೆ ತುಂಬಾ ಬೇಸರವಾಗುತ್ತಿದೆ ಈ ರೀತಿಯ ಸಂಕಷ್ಟ ಪರಿಸ್ಥಿತಿಯಲ್ಲಿ ತಾವು ಸುಮ್ಮನೆ ಕೂರಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಪ್ರವಾಹ ಕಂಡುಬಂದಿದೆ. ಅದಕ್ಕೂ ಮುನ್ನವೇ ಪ್ರವಾಹದ ಮುನ್ಸೂಚನೆ ಇದ್ದಿದ್ದರೆ ಶಸ್ತ್ರಚಿಕಿತ್ಸೆಯೆನ್ನು ಮುಂದೂಡುತ್ತಿದ್ದೆ. ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಇಂತಹ ಪರಿಸ್ಥಿತಿಯಲ್ಲಿ ಪ್ರವಾಹ ಸಂತ್ರಸ್ಥರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ತಾವು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿನ ಪರಿಹಾರ ಕಾರ್ಯ ಪರಿಶೀಲನೆ ನಡೆಸಲು ತಮ್ಮ ಪುತ್ರ ಯತೀಂದ್ರ ಬದಾಮಿಯಲ್ಲಿದ್ದು, ಪ್ರವಾಹ ಸಂತ್ರಸ್ಥರಿಗೆ ನೆರವಾಗುತ್ತಿದ್ದಾನೆ. ಜೊತೆಗೆ ಜಿಲ್ಲಾಧಿಕಾರಿ ಮತ್ತು ಮತ್ತು ಸ್ಥಳೀಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ ಸಂತ್ರಸ್ಥರ ಜೊತೆಯಲ್ಲಿ ನಾವೆಲ್ಲವೂ ಇದ್ದೇವೆ ಎಂದು ಧೈರ್ಯ ತುಂಬಿದ್ದೇನೆ ಎಂದರು.
ಕಳೆದ 30 ವರ್ಷಗಳಲ್ಲಿ ಇಂತಹ ಮಳೆ ಹಾಗೂ ಪ್ರವಾಹವನ್ನು ತಾವು ನೋಡಿಲ್ಲ. ತಮ್ಮ ರಾಜಕೀಯದ ಜೀವನದಲ್ಲಿ ಈ ರೀತಿಯ ಭೀಕರ ದುರಂತ ಕಂಡಿಲ್ಲ. ಈಗಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ, ಭೀಕರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಹಾಗೂ ರಾಜ್ಯಕ್ಕೆ 5000 ಕೋಟಿ ರೂ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ 15 ದಿನ ಕಳೆದರೂ ಮಂತ್ರಿ ಮಂಡಲ ರಚನೆಯಾಗಿಲ್ಲ. ಸಂಪುಟವೆಂದರೆ ಅದು ಬರೀ ಯಡಿಯೂರಪ್ಪ ಒಬ್ಬರೇ ಅಲ್ಲ. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಜನ ಯಾರ ಮೇಲೆ ಅವಲಂಬಿತ ಆಗಬೇಕು? ಜನರ ಕಷ್ಟಕ್ಕೆ ಸರಿಯಾಗಿ ಸ್ಪಂದಿಸಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದರು.
ಏಐಸಿಸಿ ಅಧ್ಯಕ್ಷರ ಆಯ್ಕೆಗಾಗಿ ಕರೆದಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ದೆಹಲಿಗೆ ಆಗಮಿಸಿದ್ದಾರೆ.