ಬಸ್ ನಿಲ್ದಾಣದಲ್ಲಿ ಬಂಗಾರದ ಆಭರಣಗಳ ಕಳ್ಳತನ

ರಾಣಿಬೆನ್ನೂರ:15 ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳಾ ಪ್ರಯಾಣಿಕರ ವ್ಯಾನಿಟಿ ಬ್ಯಾಗನಲ್ಲಿದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಇರ್ವರು  ಆರೋಪಿತರನ್ನು  ಶುಕ್ರವಾರ ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.  

ಏಪ್ರಿಲ್ 27ರಂದು ನಗರದ ಬಸ್ ನಿಲ್ದಾಣದಲ್ಲಿ ನಡೆದ ಬಂಗಾರದ ಆಭರಣಗಳ ಕಳವಿನ ಪ್ರಕರಣವನ್ನು  ಸ್ಥಳೀಯ ಶಹರ ಸಿಪಿಐ ಡಾ.ಶಂಕರ್‌. ಕೆ ಮತ್ತು ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ನೇತ್ರತ್ವದಲ್ಲಿ ರಚಿಸಲಾದ ಪೊಲೀಸ ತಂಡವು ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತರನ್ನು ಗದಗ ಶಹರದ ಬಜರಂಗ ಸುಖದೇವ್ ಜಾದವ ಉರ​‍್ ಮೊಟಗಾರ್ ಹಾಗೂ ಲತಾ ಬಜರಂಗ ಜಾದವ ಎಂದು ಗುರುತಿಸಲಾಗಿದೆ. ಬಂಧಿತರಿಂದ  1, 30,200 ರೂ ಮೌಲ್ಯದ 21 ಗ್ರಾಂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.