ಥಿಯೇಟರ್‌ ನಲ್ಲಿ ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾದ ನಟ ಅಲ್ಲು ಅರ್ಜುನ್

Theater stampede case: Actor Allu Arjun attended the trial

ಹೈದರಾಬಾದ್ 24:‌ 'ಪುಷ್ಪ-2' ಚಿತ್ರದ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ ನಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರು  ಮಂಗಳವಾರ ಚಿಕ್ಕಡಪಲ್ಲಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.


ತನಿಖೆಯ ಭಾಗವಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಸದ್ಯ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮನೆಯಿಂದ ವಿಚಾರಣೆಗೆ ತೆರಳುವ ಮುನ್ನ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ನಟ ಅಲ್ಲು ಅರ್ಜುನ್‌ ಕೈ ಬೀಸಿದರು.


ಇದಕ್ಕೂ ಮೊದಲು ನಟ ಅಲ್ಲು ಅರ್ಜುನ್‌ ಅವರು, ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದ್ದರು. ಆದರೆ ಅಂದು ಥಿಯೇಟರ್‌ ನಲ್ಲಿ ಸಂಭವಿಸಿದ್ದ ಘಟನೆಯ ವಿಡಿಯೋವನ್ನು ಪೊಲೀಸ್‌ ಕಮಿಷನರ್‌ ಸಿ.ವಿ.ಆನಂದ್‌ ಬಿಡುಗಡೆಗೊಳಿಸಿದ ನಂತರ ನಟ ಅಲ್ಲು ಅರ್ಜುನ್‌ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬಸ್ಥರು ಚಿಕ್ಕಡಪಲ್ಲಿ ಪೊಲೀಸ್‌ ಠಾಣೆಯಲ್ಲಿ ನಟ ಅಲ್ಲು ಅರ್ಜುನ್‌, ಅವರ ಭದ್ರತಾ ಸಿಬಂದಿಗಳು ಹಾಗೂ ಥಿಯೇಟರ್‌ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ವಿವಿಧ ಕಲಂಗಳ ಪ್ರಕಾರ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಂ 11 ಎಂದು ಹೆಸರಿಸಲಾದ ನಟ ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13 ರಂದು ಪೊಲೀಸರು ಬಂಧಿಸಿದ್ದರು. ಬಳಿಕ ತೆಲಂಗಾಣ ಹೈಕೋರ್ಟ್ ಅದೇ ದಿನ ಸಂಜೆಯ ಹೊತ್ತಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.