ರಂಗಭೂಮಿ ಜೀವನ ಮೌಲ್ಯಗಳನ್ನು ಕಲಿಸುವ ಸಾಧನ: ನಾದಾಫ

ರಂಗಭೂಮಿ ಜೀವನ ಮೌಲ್ಯಗಳನ್ನು ಕಲಿಸುವ ಸಾಧನ: ನಾದಾಫ Theater is a tool to teach life values: Nadafa

ಲೋಕದರ್ಶನ ವರದಿ 

ಧಾರವಾಡ 19: ರಂಗಭೂಮಿ ಕೇವಲ ನಟನೊಬ್ಬನ ಪ್ರತಿಭೆಯಲ್ಲ. ಮನರಂಜನೆಗೂ ಸೀಮಿತವಲ್ಲ. ಅದು ಜೀವನ ಮೌಲ್ಯಗಳನ್ನು ಕಲಿಸುವ ಸಾಧನ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದು ಧಾರವಾಡ ರಂಗಾಯಣದ ನಿರ್ದೇಶಕರಾದ ಝಕೀರ ನಾದಾಫ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 21 ದಿನಗಳ ರಂಗ ತರಬೇತಿ ಶಿಬಿರದ ಸಮಾರೋಪಕ್ಕೆ ಚಾಲನೆ ನೀಡಿ ಮಾತನಾಡಿದರು. 

ಕ.ವಿ.ವ ಸಂಘವು ನಿರಂತರವಾಗಿ ತನ್ನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುತ್ತಾ ಬಂದಿದೆ. ತನ್ನ ಎಲ್ಲಾ ಸಮ್ಮೇಳನಗಳಲ್ಲಿ ರಂಗ ಚಟುವಟಿಕೆಗಳ ನಿರಂತರ ಪ್ರೋತ್ಸಾಹ ನೀಡಿದೆ. ಕ.ವಿ.ವ ಸಂಘವು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರ ಆಯೋಜಿಸುತ್ತಿರುವುದು ಅಭಿನಂದನೀಯ. ವರ್ಷದಲ್ಲಿ 2 ಬಾರಿಯಾದರು ಇಂತಹ ಶಿಬಿರಗಳು ನಡೆಯುವಂತಾದಲ್ಲಿ ಉದಯೋನ್ಮುಕ ಕಲಾವಿದರಿಗೆ ವರದಾನವಾಗಲಿದೆ. ಕ.ವಿ.ವ ಸಂಘವು ನಾಟಕ ಪ್ರದರ್ಶನಕ್ಕೆ ಬೇಕಾದ ಧ್ವನಿ, ಬೆಳಕು ತಂತ್ರಜ್ಞಾನವನ್ನು ಅತ್ಯಾಧುನಿಕ ರೀತಿಯಲ್ಲಿ ಅಳವಡಿಸಿದ್ದು ಶ್ಲಾಘನೀಯ ಎಂದು ಹೇಳಿದರು. 

ಕ.ವಿ.ವ ಸಂಘದ ಪ್ರಧಾನ ಕಾರ್ಯದದರ್ಶಿ ಶಂಕರ ಹಲಗತ್ತಿ ಮಾತನಾಡಿ, 21 ದಿನಗಳ ಈ ರಂಗ ತರಬೇತಿ ಶಿಬಿರ ಕ.ವಿ.ವ ಸಂಘದ ವಿನೂತನ ಪ್ರಯೋಗವಾಗಿದೆ. ಕಾಲೇಜುಗಳಲ್ಲಿ ಇಂದು ರಂಗ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳಿಗೆ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಲು ಈ ಪ್ರಯೋಗ ನಮ್ಮದಾಗಿದೆ. ಹಿಂದೆ ಕಲಾಭವನದಲ್ಲಿ ವಿದ್ಯಾರ್ಥಿಗಳಿಗೆ ಯುವ ರಂಗೋತ್ಸವ ಹೆಸರಿನಿಂದ ನಾಟಕ ಪ್ರದರ್ಶನಗೊಳ್ಳುತ್ತಿದ್ದವು ಈಗ ನಮ್ಮ ಸಂಘ ಅದರ ಮುಂದುವರಿದ ಭಾಗವಾಗಿ ಕಾರ್ಯಮಾಡುತ್ತದೆ ಎಂದು ಹೇಳಿದರು. 

ಶಿಬಿರದ ನಿರ್ದೇಶಕ ಲಕ್ಷ್ಮಣ ಪೀರಗಾರ ಮಾತನಾಡಿ, 21 ದಿನಗಳ ರಂಗ ತರಬೇತಿ ಶಿಬಿರ ಕ.ವಿ.ವ ಸಂಘದ ಇತಿಹಾಸದಲ್ಲಿ ಮೊಟ್ಟ ಮೊದಲ ಯಶಸ್ವಿ ಪ್ರಯೋಗವಾಗಿದೆ. ಇಂದು ಕನ್ನಡ ರಂಗಭೂಮಿಗೆ ಕಲಾವಿದರ ಕೊರತೆ ಇದ್ದು ರಂಗ ಚಟುವಟಿಕೆಗಳು ಕ್ಷಿಣಿಸುತ್ತಿವೆ. ಈ ಸಂದರ್ಭದಲ್ಲಿ ಕ.ವಿ.ವ ಸಂಘದ ಈ ಕೊರತೆ ನೀಗಿಸುವ ಮೊದಲ ಪ್ರಯತ್ನ ಇದಾಗಿದೆ. ರಂಗಭೂಮಿ ಶಿಬಿರಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳಸಿ ಮಾನವತೆಯ ಗುಣ ಬೆಳಸಲು ಸಹಕಾರಿಯಾಗಲಿದೆ ಎಂದು ಹೇಳಿದರು. 

ಧಾರವಾಡ ರಂಗಾಯಣದ ನೂತನ ನಿರ್ದೇಶಕರಾದ ಝಕೀರ ನದಾಫ ಮತ್ತು ಶಿಬಿರದ ನಿರ್ದೇಶಕ ಹಾಗೂ ಸಹ ನಿರ್ದೇಶಕರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಿಬಿರಾರ್ಥಿಗಳಿಂದ ‘ಹುಚ್ಚಾಪುರದ ದೊರೆ’ ಹಾಗೂ ‘ಕತ್ತೆ ಪುರಾಣ’ ನಾಟಕ ಪ್ರದರ್ಶಿಸಲ್ಪಟ್ಟವು.  

ವೇದಿಕೆಯಲ್ಲಿ ಡಾ. ಮಹೇಶ ಹೊರಕೇರಿ, ವೀರಣ್ಣ ಒಡ್ಡೀನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉದಯ ದೇಸಾಯಿ ಬಿ. ಆಯ್‌. ಇಳಿಗೇರ, ಸಿ. ಎಸ್‌. ಪಾಟೀಲಕುಲಕರ್ಣಿ, ಸನ್ಮತಿ ಅಂಗಡಿ, ವಿಷಯಾ ಜೇವೂರ, ಜೊಸೆಫ್ ಮಲ್ಲಾಡಿ, ಎಂ. ಎಂ. ಚಿಕ್ಕಮಠ, ಭಿಮಣ್ಣ ಖಟಾವಿ, ಶಾರದಾ ದಾಬಡೆ, ಆಶಾ ಸೈಯದ, ಅನಿಲ ಮೆತ್ರಿ, ಶ್ರೀಧರ ಗಸ್ತಿ, ಸಿಕಂದರ ದಂಡಿನ ಹಾಗೂ ಶಿಬಿರಾರ್ಥೀಗಳ ಪಾಲಕರು ಉಪಸ್ಥಿತರಿದ್ದರು.