ಸಮರ್ಥನಂ ಸಂಸ್ಥೆಯ ಸೇವೆಗೆ ಸಮಾಜದ ಶ್ರೀಮಂತರು ಕೈಜೋಡಿಸಿ: ಭೂಷಣ ಬೋರಸೆ
The wealthy of the society joined hands to serve the Samarthanaam organization: Bhushan Borase
ಬೆಳಗಾವಿ 23: ಸಮರ್ಥನಂ ಸಂಸ್ಥೆಯು ಬುದ್ಧಿ ವಿಶೇಷಚೇತನ ಮಕ್ಕಳಿಗಾಗಿ ಸಲ್ಲಿಸುತ್ತಿರುವ ಸೇವೆ ಅಪಾರವಾದದ್ದು. ಸಮಾಜದ ಶ್ರೀಮಂತರು ಈ ಸೇವೆಗೆ ಕೈಜೋಡಿಸಿ, ಈ ಮಕ್ಕಳು ಇತರರಂತೆ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಬೆಳಗಾವಿ ನಗರದ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರು ಕರೆ ನೀಡಿದರು.
ಬೆಳಗಾವಿಯ ಜಿಜಾಮಾತಾ ಹೈಸ್ಕೂಲ್, ಮರಾಠ ಮಂಡಲ ಆವರಣದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಬುದ್ಧಿ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಇಂದು ನೂತನ ಸೌಲಭ್ಯಗಳನ್ನು ಮತ್ತು ಆಪ್ಟಮ್ ಸಂಸ್ಥೆಯ ಸಹಯೋಗದೊಂದಿಗೆ ಫಿಜಿಯೋಥೆರಪಿ ಕೇಂದ್ರ, ಸ್ಮಾರ್ಟ್ ಬೋರ್ಡ್, ವಿಶೇಷ ಶಾಲಾ ಕೊಠಡಿಗಳಿಗೆ ಪೀಠೋಪಕರಣ ಹಾಗೂ ವೃತ್ತಿಪರ ತರಬೇತಿ ಕೇಂದ್ರಗಳನ್ನು ವಿನೂತನವಾಗಿ ಪ್ರಾರಂಭಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ಧಿ ವಿಕಲಚೇತನ ಮಕ್ಕಳಲ್ಲದೆ, ಅಂಧತ್ವ, ದೈಹಿಕ ವಿಕಲಚೇತನರು, ವಾಕ್ ಮತ್ತು ಶ್ರವಣದೋಷವುಳ್ಳವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ವಿಶೇಷ ತರಬೇತಿ ನೀಡಿ, ಪ್ರತಿಷ್ಠಿತ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವುದು ಸುಲಭದ ಮಾತಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅಂಗವಿಕಲರಿಗಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗೆ ನಗರದ ದಾನಿಗಳು, ಉದ್ಯಮಿಗಳು ಹಾಗೂ ಇತರ ಶ್ರೀಮಂತರು ಸೇವೆ ಸಲ್ಲಿಸುವ ಮೂಲಕ ಹೆಚ್ಚಿನ ದಿವ್ಯಾಂಗ ಸಮುದಾಯಕ್ಕೆ ಸೇವೆ ಸಲ್ಲಿಸುವ ಶಕ್ತಿಯನ್ನು ತುಂಬಬೇಕು ಎಂದು ಬೋರಸೆ ಆಶಿಸಿದರು.
ವಿಶೇಷ ಆಹ್ವಾನಿತರಾಗಿದ್ದ ನಗರದ ಪ್ರಖ್ಯಾತ ಚಿನ್ನದ ವ್ಯಾಪಾರಿ ಮತ್ತು ಸಮಾಜ ಸೇವಕ ಅನಿಲ್ ಪೋದದಾರ್ ಅವರು ಮಾತನಾಡಿ 2002ರಲ್ಲಿ ತಮ್ಮ ಕುಟುಂಬದ ವತಿಯಿಂದ ಬೆಳಗಾವಿ ನಗರದಲ್ಲಿ ಅಂಧರು ಮತ್ತು ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಕಾಯಂ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಇದು ಸಮರ್ಥನಂ ಸಂಸ್ಥೆ ಬೆಳಗಾವಿಗೆ ಬರಲು ಕಾರಣವಾಯಿತು ಎಂದರು. ಸಮರ್ಥನಂ ಸಂಸ್ಥೆಯು ಅತ್ಯುನ್ನತ ಕಾರ್ಯಕ್ರಮಗಳನ್ನು ರೂಪಿಸಿ ನಿರ್ವಹಿಸುತ್ತಿದೆ. ಸಂಸ್ಥಾಪಕ ಡಾ. ಮಹಾಂತೇಶ ಕಿವುಡಸಣ್ಣನವರು ಅಪ್ರತಿಮ ಕೆಲಸಗಾರರು. ಅವರ ಶ್ರಮದ ಫಲವಾಗಿ, ಈ ಸ್ಪರ್ಧಾತ್ಮಕ ದಿನಗಳಲ್ಲಿಯೂ ಸಮರ್ಥನಂ ಸಂಸ್ಥೆ ತನ್ನತನವನ್ನು ಕಳೆದುಕೊಳ್ಳದೆ ಲಕ್ಷಾಂತರ ದಿವ್ಯಾಂಗರಿಗೆ ಸತ್ಕಾರ್ಯಗಳನ್ನು ಮಾಡುತ್ತಿದೆ. ತಮ್ಮ ಕುಟುಂಬದ ವತಿಯಿಂದ ಮುಂಬರುವ ದಿನಗಳಲ್ಲಿ ಈ ಸಂಸ್ಥೆಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲು ಸಹಕರಿಸುವುದಾಗಿ ಅವರು ತಿಳಿಸಿದರು.
ಕೆಎಲ್‌ಇ ಸಂಸ್ಥೆಯ ಎನ್‌ಎಸ್‌ಎಸ್ ವಿಭಾಗದ ಸಂಯೋಜಕ ಡಾ. ಅಶ್ವಿನಿ ನರಸಣ್ಣವರ ಅವರು, ಬುದ್ಧಿ ವಿಕಲಚೇತನ ಮಕ್ಕಳ ಪ್ರಗತಿಯಲ್ಲಿ ಕೇವಲ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯವಲ್ಲ, ಪಾಲಕರ ಪಾತ್ರವೂ ಅತ್ಯಮೂಲ್ಯವಾದದ್ದು ಎಂದರು. ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವುದಕ್ಕಿಂತ ಅವರಿಗೆ ಪ್ರೋತ್ಸಾಹಿಸುವುದರ ಬಗ್ಗೆ ಗಮನ ಹರಿಸಬೇಕು. ತಮ್ಮ ಸಂಸ್ಥೆಯಿಂದ ವೈದ್ಯಕೀಯ ಸೌಲಭ್ಯ ನೀಡಲು ತಾವು ಸದಾ ಸಿದ್ಧರಿದ್ದು, ಅದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಕೆಎಲ್‌ಇ ಸಂಸ್ಥೆಯ ಉಪ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕ ಸಂತೋಷ್ ಮೆಟಗುಡ್ ಅವರು, ಸಂಸ್ಥೆಯ ವತಿಯಿಂದ ಫಿಸಿಯೋಥೆರಪಿ ಕೇಂದ್ರಕ್ಕೆ ವೈದ್ಯರನ್ನು ಕಳುಹಿಸಿ ಪ್ರತಿ ವಿದ್ಯಾರ್ಥಿಗೂ ಪ್ರತಿದಿನ ಕನಿಷ್ಠ 35 ರಿಂದ 45 ನಿಮಿಷಗಳ ಕಾಲ ಚಿಕಿತ್ಸೆ ನೀಡುವ ಅವಕಾಶ ಕಲ್ಪಿಸಲಾಗುವುದು ಎಂದು ನುಡಿದರು.
ಡಾ. ಮಹೇಶರವರು ಮಕ್ಕಳ ಅನಾರೋಗ್ಯದ ವಿಷಯ ಬಂದಾಗ ಪಾಲಕರು ಕೇವಲ ಅವರ ದೈಹಿಕ ಆರೋಗ್ಯವನ್ನು ನೋಡುವುದು ಮುಖ್ಯವಲ್ಲ, ಅವರ ಬಾಹ್ಯ ಆರೋಗ್ಯವೂ ಅತ್ಯಂತ ಪ್ರಮುಖವಾಗಿರುತ್ತದೆ ಎಂದರು. ಪ್ರಥಮ ಚಿಕಿತ್ಸೆಯನ್ನು ಶೀಘ್ರವಾಗಿ ಕೊಡಿಸಿದರೆ ಅನಾರೋಗ್ಯಕ್ಕೆ ಒಳಗಾದ ಮಕ್ಕಳನ್ನು ಗುಣಪಡಿಸುವುದು ಅತಿ ಸುಲಭ. ಇನ್ನು ಮುಂದಿನ ದಿನಗಳಲ್ಲಿ ಸಮರ್ಥನಂ ಸಂಸ್ಥೆಗೆ ಮೇಲಿಂದ ಮೇಲೆ ಭೇಟಿ ನೀಡಿ ಉಚಿತ ದಂತ ಚಿಕಿತ್ಸೆ ನೀಡುವುದಾಗಿ ಅವರು ಭರವಸೆ ನೀಡಿದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಬುದ್ಧಿ ವಿಕಲಚೇತನ ಮಕ್ಕಳ ಶಾಲೆಯ ಪ್ರಾಂಶುಪಾಲ ಡಾ. ಗೀತಾ ಕೆ ಅವರು, ನೂತನವಾಗಿ ಪ್ರಾರಂಭಿಸಿರುವ ಫಿಸಿಯೋಥೆರಪಿ ಕೇಂದ್ರದ ವೃತ್ತಿಪರ ತರಬೇತಿಗಳಲ್ಲಿ ಅಗರಬತ್ತಿ, ಮೇಣದಬತ್ತಿ ತಯಾರಿಕೆ ಹಾಗೂ ಆರ್ಟ್ ಅಂಡ್ ಕ್ರಾಫ್ಟ್, ಟೈಲರಿಂಗ್ ಮತ್ತು ಬೇರೆ ಬೇರೆ ವಿಭಾಗಗಳ ಕುರಿತು ವಿಸ್ತೃತ ಮಾಹಿತಿಯನ್ನು ನೀಡಿದರು. 18 ರಿಂದ 30 ವರ್ಷದ ವಯೋಮಿತಿಯ ಮೈಲ್ಡ್ ಬುದ್ಧಿಮಾಂದ್ಯ ಮಕ್ಕಳಿಗೆ ಈ ತರಬೇತಿಯನ್ನು ನೀಡಲಾಗುವುದು, ಅವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸಮರ್ಥನಂ ಸಂಸ್ಥೆಯ ನಿರ್ದೇಶಕ ವೀರೇಶ್ ಕಿವಿಡಸಣ್ಣನವರು ಮಾತನಾಡುತ್ತಾ, ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸುವಂತಹ ಸಿಬ್ಬಂದಿಗಳು ತಮ್ಮ ಸಂಸ್ಥೆಗೆ ಸಿಕ್ಕಿರುವುದು ಅತ್ಯಂತ ಸಂತೋಷದ ವಿಷಯ ಎಂದರು. ವಿನೂತನವಾಗಿ ಪ್ರಾರಂಭಿಸಿರುವ ಫಿಸಿಯೋಥೆರಪಿ ಕೇಂದ್ರವು ಬುದ್ಧಿ ವಿಕಲಚೇತನ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳ ಸುಧಾರಣೆಗೆ ಸಹಕಾರಿಯಾಗಲಿದೆ. ವೃತ್ತಿ ತರಬೇತಿ ಕೇಂದ್ರ ನಡೆಸುತ್ತಿರುವ ವಿವಿಧ ಕೌಶಲ್ಯ ಆಧಾರಿತ ತರಬೇತಿಗಳು ಈ ವ್ಯಕ್ತಿಗಳ ಸ್ವಯಂ ಜೀವನ ನಿರ್ವಹಣೆಗೆ ಸಹಕಾರಿ ಆಗಲಿವೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಮರ್ಥನಂ ಸಂಸ್ಥೆಯ ಟ್ರಸ್ಟಿ ಉದಯಕುಮಾರ ಬಾಗನವರ ಅವರು ಮಾತನಾಡಿ ಸಮರ್ಥನಂ ಸಂಸ್ಥೆ ಬೆಳೆದು ಒಂದು ದೊಡ್ಡ ಹೆಮ್ಮರವಾಗಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೆಗಿನಹಾಳ ಗ್ರಾಮದ ಡಾ. ಮಹಾಂತೇಶ ಕಿವುಡಸಣ್ಣನವರ ಪ್ರಯತ್ನದ ಫಲವಾಗಿ ಸಮರ್ಥನಂ ಸಂಸ್ಥೆ ಪ್ರಾರಂಭವಾಗಿದೆ. ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಬೆಳಗಾವಿಯಲ್ಲಿ ಇನ್ನೂವರೆಗೂ ಸ್ವಂತ ಕಟ್ಟಡವನ್ನು ನಿರ್ಮಿಸಲು ನಿವೇಶನದ ಲಭ್ಯತೆ ಇಲ್ಲದ ಕಾರಣ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದೆ. ಜಿಲ್ಲಾಡಳಿತ ಅಥವಾ ಬೆಳಗಾವಿ ನಗರದ ಮಹಾನಗರ ಪಾಲಿಕೆ ಸೂಕ್ತ ನಿವೇಶನವನ್ನು ನೀಡಿದ್ದಲ್ಲಿ, ವಿಕಲಚೇತನ ಸ್ನೇಹಿ ಕಟ್ಟಡ ನಿರ್ಮಿಸಿ, ಈ ಭಾಗದ ವಿಕಲಚೇತನರು ನಿರಾತಂಕವಾಗಿ ಜೀವನ ನಡೆಸಲು ಅವರಿಗೆ ಎಲ್ಲಾ ತರಬೇತಿಗಳು, ಉನ್ನತ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ನುಡಿದರು.
ಬೆಳಗಾವಿ ಕೇಂದ್ರದ ಮುಖ್ಯಸ್ಥ ಅರುಣ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಸಮರ್ಥನಂ ಸಂಸ್ಥೆಯ ಬೆಳಗಾವಿ ಶಾಖೆಯು 2011 ರಿಂದ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ 2950 ವಿವಿಧ ವಿಕಲಚೇತನರು ಹಾಗೂ ಆರ್ಥಿಕವಾಗಿ ಹಿಂದುಳಿದ ಯುವಕ ಮತ್ತು ಯುವತಿಯರಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ ಶೇ. 75 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ದೊರಕಿಸಿಕೊಟ್ಟ ಕೀರ್ತಿ ಸಮರ್ಥನಂ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು.
ಲಾವಣ್ಯಾ ಮತ್ತು ಶ್ರೀನಿವಾಸ ರೆಡ್ಡಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರು, ಬುದ್ಧಿ ವಿಕಲಚೇತನ ಮಕ್ಕಳು, ಪಾಲಕರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 