ನವದೆಹಲಿ, ನ ೨೮-ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ದ್ವಂಸಗೊಳಿಸಲು ಬಿಜೆಪಿ ತನ್ನ ನಾಚಿಗೆಗೇಡು ನಡವಳಿಕೆಯನ್ನು ಪ್ರದರ್ಶಿಸಿದ್ದು, ಮೂರು ಪಕ್ಷಗಳ ಮೈತ್ರಿ ಕೂಟ ಅಧಿಕಾರಕ್ಕೆ ಬರದಂತೆ ತಡೆಯಲು ಎಲ್ಲ ರೀತಿಯ ಕುತಂತ್ರಗಳನ್ನು ನಡೆಸಿತು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ.
ಸಂಸತ್ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸೋನಿಯಾ ಗಾಂಧಿ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಕೂಡ ಅತ್ಯಂತ ನಿಂದನಾರ್ಹ ರೀತಿಯಲ್ಲಿ ವ್ಯವಹರಿಸಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮತ್ತು ಗೃಹ ಸಚಿವರ ಆದೇಶಗಳ ಮೇರೆಗೆ ರಾಜ್ಯಪಾಲರು ವ್ಯವಹರಿಸಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಚುನಾವಣೆಗೆ ಮುನ್ನ ಮೈತ್ರಿಕೂಟದ ಬಗ್ಗೆ ಅತಿಯಾದ ಆತ್ಮವಿಶ್ವಾಸ, ಆಹಂಕಾರದಿಂದಾಗಿ ಬಿಜೆಪಿ ತನ್ನ ಮಿತ್ರ ಪಕ್ಷ ಶಿವಸೇನೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ದೂರಿದರು.
ಇದಲ್ಲದೆ, ಮೂರು ಪಕ್ಷಗಳ ಮೈತ್ರಿ ಸರ್ಕಾರ ರಚಿಸುವುದನ್ನು ತಡೆಯಲು ಎಲ್ಲಾ ವಿಧಾನಗಳನ್ನು ಅನುಸರಿಸಿತು. ಆದರೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ ಮೋದಿ-ಅಮಿತ್ ಶಾ ಜೋಡಿಯ ಬಂಡವಾಳ ಬಯಲಾಯಿತು ಎಂದು ಹೇಳಿದ್ದಾರೆ..
ಮೂರು ಪಕ್ಷಗಳು ಒಗ್ಗಟ್ಟಿನಿಂದ ಬಿಜೆಪಿಯ ಕುತಂತ್ರಗಳನ್ನು ಹಿಮ್ಮೆಟ್ಟಿಸಲಿವೆ ಎಂಬ ಖಚಿತ ಭರವಸೆಯನ್ನು ನಾನು ನೀಡುತ್ತೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ದೇಶದಲ್ಲಿ ರೈತರು ಮತ್ತು ಉದ್ಯಮಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರ ಖರೀದಿಸುವ ಶಕ್ತಿ ದಾರುಣವಾಗಿ ಕುಸಿದಿದೆ. ರಫ್ತು ಪ್ರಮಾಣ ಕುಸಿದಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ.ಜನರು ದೈನಂದಿನ ಬದುಕು ನಿಭಾಯಿಸಲು ಅತ್ಯಂತ ಕಷ್ಟ ಪಡುವಂತಾಗಿದೆ ಎಂದು ಹೇಳಿದ್ದಾರೆ
ಈ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಬದಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಾರ್ವಜನಿಕ ವಲಯದ ಕಂಪನಿಗಳನ್ನು ಕೆಲವು ಉದ್ಯಮಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ