ನವದೆಹಲಿ, ಫೆ ೫ : ಬಿಜೆಪಿ ಸಂಸದ ಪರ್ವೇಶ್ ವರ್ಮಾ, ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವುದು ತೀವ್ರ ಮಾನಸಿಕ ಕ್ಷೋಭೆಗೆ ಗುರಿಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ನೋವು ತೋಡಿಕೊಂಡಿದ್ದಾರೆ.
ತಮ್ಮ ಜೀವನವನ್ನು ದೇಶದ ಸೇವೆಗಾಗಿ ಸಮರ್ಪಿಸಿಕೊಂಡಿದ್ದೇನೆ. ಈ ಉದ್ದೇಶಕ್ಕಾಗಿ ಸರ್ಕಾರಿ ಉದ್ಯೋಗವನ್ನು ಸಹ ತ್ಯಜಿಸಿದ್ದಾಗಿ ಅವರು ಹೇಳಿದ್ದಾರೆ.
ಒಂದೊಮ್ಮೆ ತಾವು ದೆಹಲಿಯ ಜನರಿಗೆ ಭಯೋತ್ಪಾದಕನಂತೆ ಕಂಡು ಬಂದರೆ ಮತವನ್ನು ಬಿಜೆಪಿಗೆ ಚಲಾಯಿಸಲಿ, ಇಲ್ಲವಾದರೆ ನಮ್ಮ ಪಕ್ಷದ “ಪೊರಕೆ” ಗುರುತಿಗೆ ಮತ ನೀಡಲಿ ಎಂದು ಮನವಿ ಮಾಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರ ವೇಳೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ, ಕೇಜ್ರಿವಾಲ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹಿನ್ನಲೆಯಲ್ಲಿ ಬುಧವಾರ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, 'ಅವರ ಮಾತು ನನ್ನ ಮನಸ್ಸನ್ನು ತೀವ್ರ ಘಾಸಿಗೊಳ್ಳುವಂತೆ ಮಾಡಿದೆ. ನನ್ನ ಕುಟುಂಬ, ಮಕ್ಕಳಿಗಾಗಿ ನಾನೇನು ಮಾಡಿಲ್ಲ. ಐಐಟಿಯಲ್ಲಿನ ನನ್ನ ಸಹಪಾಠಿಗಳಲ್ಲಿ ಶೇ ೮೦ರಷ್ಟು ಮಂದಿ ವಿದೇಶದಲ್ಲಿ ನೆಲೆಸಿದ್ದಾರೆ. ನಾನು ಮಾತ್ರ ದೇಶದ ಸೇವೆಗೆ ಸಮರ್ಪಿಸಿಕೊಂಡಿದ್ದೇನೆ ಎಂದು ಕೇಜ್ರೀವಾಲ್ ಹೇಳಿದ್ದಾರೆ.
ದೇಶ ಸೇವೆಗಾಗಿ ಆದಾಯ ತೆರಿಗೆ ಆಯುಕ್ತರ ಕೆಲಸವನ್ನೂ ತ್ಯಜಿಸಿದೆ. ನಾನು ಭಯೋತ್ಪಾದಕನೇ? ಅಥವಾ ಅಲ್ಲವೇ? ಎಂಬುದನ್ನು ತೀರ್ಮಾನಿಸಲು ಅಂತಿಮವಾಗಿ ದೆಹಲಿಯ ಜನರಿಗೆ ಬಿಟ್ಟಿದ್ದೇನೆ ನಾನು ಭಯೋತ್ಪಾದಕನೆಂದು ನೀವು ಭಾವಿಸಿದರೆ, ಫೆಬ್ರವರಿ ೮ ರಂದು ಬಿಜೆಪಿಗೆ ಮತನೀಡಿ, ಒಂದು ವೇಳೆ ದೆಹಲಿ, ದೇಶದ ಜನರಿಗಾಗಿ ಕೆಲಸ ಮಾಡಿದ್ದೇನೆ ಎಂದು ನೀವು ಬಾವಿಸಿದ್ದೇ ಆದರೆ, ಆಮ್ ಆದ್ಮಿ ಪಕ್ಷದ ಗುರುತು “ಪೊರಕೆ” ಗೆ ಮತ ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.