ಬೆಂಗಳೂರು, ಮೇ 23, ಕೊರೊನಾವನ್ನು ನಿಭಾಯಿಸಲು ಪ್ರಯತ್ನ ನಡೆಯುತ್ತಿರುವ ಮಧ್ಯೆಯೂ ಬೆಂಗಳೂರಿನ ಶಾಸಕರು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಅತಿಥಿ ಕಾರ್ಮಿಕರಿಗೆ, ದುಡಿಯುವ ವರ್ಗಕ್ಕೆ ಮೀಸಲಾಗಿ ಇಟ್ಟಂತಹ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು , ಆಹಾರ ಪೊಟ್ಟಣಗಳನ್ನು ಹಾಗೂ ಇನ್ನಿತರ ಸೌಲಭ್ಯಗಳನ್ನು ನೇರವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಗಳ ದೃಷ್ಟಿ ಇಟ್ಟುಕೊಂಡು ತಮ್ಮ, ತಮ್ಮ ಕ್ಷೇತ್ರಗಳ ಮತದಾರರು, ಬೆಂಬಲಿಗರು, ಪುಡಾರಿಗಳ ಮನೆಗೆ ಹಂಚಿಕೆ ಮಾಡುವ ಮೂಲಕ ಹಸಿದ ಹೊಟ್ಟೆಗಳನ್ನು ಉಪವಾಸ ಕೆಡವಿದ ಸರ್ಕಾರದ ವರ್ತನೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಇವೆಲ್ಲವನ್ನೂ ಕಂಡೂ ಕಾಣದಂತೆ ಮೌನವಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕರ ಲಾಬಿಗೆ ಅದರಲ್ಲೂ ಬೆಂಗಳೂರಿನ ಬಿಜೆಪಿ ಶಾಸಕರ ಹಾಗೂ ಮಂತ್ರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ನೋಡಿದರೆ ಇಲ್ಲಿ ಯಾರ ಮೇಲೂ ಯಾರೂ ನಿಯಂತ್ರಣ ಹೊಂದಿಲ್ಲದ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ ಎಂದು ಆಪ್ ಟೀಕಿಸಿದೆ.
ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಊಟ ಸಿಗುತ್ತಿದೆಯೇ, ಅವರಿಗೆ ಸಂಬಳ ಹೋಗುತ್ತಿದೆಯೇ ಎಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದೇ ತಮ್ಮ ಪಾಡಿಗೆ ಇದ್ದ ಅಧಿಕಾರಿಗಳು, ಸಚಿವರು ಕೇವಲ ನಾಮಕಾವಸ್ಥೆಗೆ ಮಾತ್ರ ಅಲ್ಲಿ ಇಲ್ಲಿ ಆಹಾರ ಪದಾರ್ಥಗಳನ್ನು ಹಂಚಿ ಕೈ ತೊಳೆದುಕೊಂಡು ಈಗಿನ ದುರವಸ್ಥೆಗೆ ಕಾರಣರಾಗಿದ್ದಾರೆ. ಕಾರ್ಮಿಕರಿಗೆ ವಿತರಿಸಲು ಇದ್ದ ಪರಿಹಾರ ಕಿಟ್‌ಗಳನ್ನು ಹಸ್ತಾಂತರಿಸುವ ವಿಚಾರದಲ್ಲೂ ರಾಜಕೀಯ ಮಾಡುವ ಶಾಸಕರು ಇಲಾಖೆಯ ಯೋಜನೆಯನ್ನು ತಮ್ಮ ಸಹಾಯ ಎಂದು ಬಿಂಬಿಸಿಕೊಳ್ಳಲು ಹೊರಟಿರುವ ನಡೆ ನಾಚೀಕೆಗೇಡು ಅಲ್ಲದೇ ಈ ಕೆಲಸ ಕೆಟ್ಟ ಸಂಸ್ಕೃತಿಯೊಂದಕ್ಕೆ ಮುನ್ನುಡಿ ಹಾಕಿಕೊಟ್ಟಂತೆ.
ಈಗಾಗಲೇ ಕೈಯಲ್ಲಿರುವ ಅಲ್ಪ ಕಾಸನ್ನು ಕಳೆದುಕೊಂಡು ಕಂಗಾಲಾಗಿರುವ ಕಾಮಿ೯ಕರಿಗೆ ಧೈರ್ಯ ತುಂಬುವ ಬದಲು ಅವರ ಕಾನೂನುಗಳನ್ನು ನುಂಗಿ ನೀರು ಕುಡಿದು ಭವಿಷ್ಯವನ್ನೆ ಕರಾಳ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸ್ಥಳೀಯ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಿದ್ದರೆ ಯಾರೂ ಸಹ ನಗರನ್ನು ಬಿಟ್ಟು ಹೋಗುತ್ತಿರಲಿಲ್ಲ. ಲಾಕ್‌ಡೌನ್ ಸಡಿಲಗೊಂಡ ಮೇಲೆ ಪ್ರಮುಖ ಆರ್ಥಿಕ ಚಟುವಟಿಕೆಗಳ ಮೇಲೆ ಕಾರ್ಮಿಕರ ಕೊರತೆ ಸಾಕಷ್ಟು ಪರಿಣಾಮ ಬೀರಲಿದೆ. ಜತೆಗೆ ಕಟ್ಟಡ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡು ಇರುವವರೂ ಸಹ ಕೆಲಸವಿಲ್ಲದೆ ಪರದಾಡಬೇಕಾಗುತ್ತದೆ. ಈ ಎಲ್ಲಾ ಕೆಟ್ಟ ಪರಿಣಾಮಗಳಿಗೆ ದುರಾಸೆ ಬುದ್ದಿಯ ಶಾಸಕರು, ಸ್ಥಳೀಯ ನಾಯಕರುಗಳೇ ನೇರ ಕಾರಣ ಎಂದು ಅವರು ಆರೋಪಿಸಿದರು.