ಸರಣಿ ಗೆಲುವು ಸಂಪೂರ್ಣ ತೃಪ್ತಿ ತಂದಿದೆ: ಕೊಹ್ಲಿ

ಬೆಂಗಳೂರು, ಜ 20 ,ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷ ಸೋಲು ಅನುಭವಿಸಿದ್ದ ನಮಗೆ ಈ ಬಾರಿ ಮೂರು ಪಂದ್ಯಗಳ ಸರಣಿ ಗೆದ್ದಿರುವುದು ಸಂಪೂರ್ಣ ತೃಪ್ತಿ ತಂದಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.ರೋಹಿತ್ ಶರ್ಮಾ ಶತಕ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ಬಲದಿಂದ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 287 ರನ್ ಗುರಿಯನ್ನು ಟೀಮ್ ಇಂಡಿಯಾ ಯಶಸ್ವಿಯಾಗಿ ಮುಟ್ಟಿತ್ತು. ಏಳು ವಿಕೆಟ್ ಹಾಗೂ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಭಾರತ ಗೆದ್ದು ಬಿಗಿತ್ತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೊಹ್ಲಿ ಪಡೆ 2-1` ಅಂತರದಲ್ಲಿ ತನ್ನದಾಗಿಸಿಕೊಂಡಿತು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, “ಪಂದ್ಯ ಆರಂಭದಲ್ಲಿಯೇ ನಾವು ಅನುಭವಿ ಆರಂಭಿನ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ಕಳೆದುಕೊಂಡವು. ಅವರ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಆರಂಭಿನಾಗಿ ಆಡಿದರು. ಉತ್ತಮ ಆರಂಭದ ಹೊರತಾಗಿಯೂ ರಾಹುಲ್ ವಿಕೆಟ್ ಒಪ್ಪಿಸಿದರು. ಏಕೆಂದರೆ, ಆ ವೇಳೆ ಚೆಂಡು ತಿರುಗುತ್ತಿತ್ತು. ನಾನು ಕ್ರೀಸ್ ಗೆ ಹೋದ ಬಳಿಕ ರೋಹಿತ್ ಶರ್ಮಾ ಬಳಿ ಮಾತನಾಡಿಕೊಂಡು ಎಚ್ಚರಿಕೆಯ ಹೆಜ್ಜೆ ಇಟ್ಟೆವು. ಆಸ್ಟ್ರೇಲಿಯಾ ವಿಕೆಟ್ ಗಾಗಿ ಹಾತೊರೆಯುತ್ತಿದ್ದು, ನಾವು ದೊಡ್ಡ ಜತೆಯಟವಾಡುವ ಅಗತ್ಯವಿದೆ ಎಂದು ಮಾತನಾಡಿಕೊಂಡೆವು,” ಎಂದು ಹೇಳಿದರು. ರೋಹಿತ್ ಹಾಗೂ ಕೊಹ್ಲಿ ಜೋಡಿ ಮುರಿಯದ ಎರಡನೇ ವಿಕೆಟ್ ಗೆ 137 ರನ್ ಗಳಿಸಿತು. ಈ ಜತೆಯಾಟ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿ,” ಕಳೆದ 4-5 ವರ್ಷಗಳಲ್ಲಿ ನಾವು ಹೇಗೆ ಆಡಿದ್ದೇವೆ ಅದರಂತೆ ಪ್ರದರ್ಶನ ತೋರಿದೆವು. ರೋಹಿತ್ ಅವರ ಬ್ಯಾಟಿಂಗ್ ಅನ್ನು ನಾನು ಆಹ್ಲಾದಿಸುತ್ತಿದ್ದೆ. ಆದರೆ, ಇದು ನಮಗೆ ಸಮಗ್ರ ಗೆಲುವಾಗಿದೆ,’’ ಎಂದು ಕೊಹ್ಲಿ ತಿಳಿಸಿದರು. 

ಕಳೆದ ವರ್ಷ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿಯಲ್ಲಿ ಅವರು ಆರಂಭದಲ್ಲಿ 2-0 ಹಿನ್ನಡೆ ಅನುಭವಿಸಿದ್ದರು. ನಂತರ ಸತತ ಮೂರೂ ಪಂದ್ಯಗಳನ್ನು ಗೆದ್ದು ಸರಣಿ ಗೆದ್ದು ಬೀಗಿದ್ದರು. ಆದರೆ, ಈ ಬಾರಿ ವಾರ್ನರ್ ಹಾಗೂ ಸ್ಮಿತ್ ಅವರೊಂದಿಗೆ ಬಂದಿದ್ದು, ಮೊದಲನೇ ಪಂದ್ಯ 10 ವಿಕೆಟ್ ಗಳಿಂದ ಭಾರತವನ್ನು ಹೀನಾಯವಾಗಿ ಮಣಿಸಿತ್ತು. ಆದಾಗ್ಯೂ, ಪುಟಿದೆದ್ದ ಭಾರತ 2-1 ಅಂತರದಲ್ಲಿ ಸರಣಿ ಜಯಿಸಿತು.ಈ ಬಗ್ಗೆ ಮಾತನಾಡಿದ ಕೊಹ್ಲಿ,”ಈ ಸರಣಿಯ ಜಯ ಸಂಪೂರ್ಣ ತೃಪ್ತಿ ತಂದಿದೆ. ಏಕೆಂದರೆ, ಕಳೆದ ಬಾರಿ ಇದ್ದ ತಂಡಕ್ಕಿಂತ ಈಗಿನ ತಂಡ ಬಲಿಷ್ಠವಾಗಿತ್ತು. ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಅವರಂಥ ಬಲಿಷ್ಠ ಬ್ಯಾಟಿಂಗ್ ಪಡೆ ಜತೆಗೆ ಬೌಲಿಂಗ್ ವಿಭಾಗವೂ ಅತ್ಯುತ್ತಮವಾಗಿತ್ತು. 2020ರ ವರ್ಷಕ್ಕೆ ನಮಗೆ ಅತ್ಯುತ್ತಮ ಆರಂಭ ಸಿಕ್ಕಿದೆ,” ಎಂದರು.