ಯಶಸ್ಸಿನ ರಹಸ್ಯವಿರುವುದೇ ಏಕಾಗ್ರತೆಯಲ್ಲಿ: ನಾಯಕ

ಯಶಸ್ಸಿನ ರಹಸ್ಯವಿರುವುದೇ ಏಕಾಗ್ರತೆಯಲ್ಲಿ: ನಾಯಕ The secret to success lies in concentration: Nayak

ಲೋಕದರ್ಶನ ವರದಿ 

ಧಾರವಾಡ 03: ಯಶಸ್ಸಿನ ರಹಸ್ಯವಿರುವುದೇ ಏಕಾಗ್ರತೆಯಲ್ಲಿ. ಮನಸ್ಸು ನಿಮ್ಮ ಹತೋಟಿಯಲ್ಲಿಟ್ಟುಕೊಂಡು ಓದಿದರೆ ವಿನಾಕಾರಣ ಪರೀಕ್ಷೆಯ ಬಗ್ಗೆ ಭಯ ಏಂದೂ ಉಂಟಾಗುವುದಿಲ್ಲ ಎಂದು ರಾಷ್ಟ್ರ​‍್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಕೆ. ಎಚ್‌. ನಾಯಕ ಹೇಳಿದರು. 

ಅವರು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಹೆಬ್ಬಳ್ಳಿಯ ನೆಹರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪರೀಕ್ಷಾ ಪೂರ್ವ ಸಿದ್ಧತೆ ಹೇಗಿರಬೇಕು?’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ಸೋಲಿಗೆ ಭಯ ಪಡಬಾರದು. ಆ ಸೋಲು ಭವಿಷ್ಯದಲ್ಲಿ ನಿಮಗೆ ಜೀವನ ಪಾಠ ಕಲಿಸುತ್ತದೆ. ಶ್ರದ್ಧೆಯಿಂದ ಓದಿದರೆ ಯಶಸ್ಸು ಶತಸಿದ್ದ. ಓದುವಾಗ ಅನ್ಯವಿಷಯಗಳತ್ತ ಗಮನ ಹರಿಸದೇ ಓದಬೇಕೆಂದು ಹೇಳಿದರು. 

ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಅಭ್ಯಾಸ ಮಾಡುವಾಗ ಮೊದಲು ನಿಮ್ಮಲ್ಲಿ ನಿಮಗೆ ಭರವಸೆ ಮುಖ್ಯ. ಏಕಾಗ್ರತೆಯಿಂದ ಓದಿದರೆ ಎಂತಹ ಮಹತ್ಕಾರ್ಯವನ್ನು ಸಾಧಿಸಬಹುದು. ತಂದೆ-ತಾಯಿ ನಿಮ್ಮಲ್ಲಿಟ್ಟಿರುವ ಭರವಸೆ ಹುಸಿಯಾಗದಂತೆ ಓದಲು ತಿಳಿಸಿದರು. 

ಡಿಮ್ಹಾನ್ಸ ಸಾಮಾಜಿಕ ಆರೋಗ್ಯ ಕಾರ್ಯಕರ್ತರಾದ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಚಂಚಲಚಿತ್ತ ಮನಸ್ಸನ್ನು ಸ್ವಾಧಿನಕ್ಕೆ ತಂದುಕೊಂಡು ಓದಬೇಕು. ಅಂದಾಗ ಏಕಾಗ್ರತೆ ಲಭಿಸುತ್ತದೆ. ಮೊದಲು ಮಾಡಬೇಕಾದ ಕೆಲಸ ಮಾಡದೇ ಅನ್ಯ ವಿಷಯಗಳತ್ತ ಗಮನ ಹರಿಸಬಾರದು. ಮನಸ್ಸನ್ನು ಎಚ್ಚರದ ಸ್ಥಿತಿಯಲ್ಲಿರಿಸಿ  ಓದಿರಿ. ನಾಳೆ ಅಧ್ಯಯನ ಮಾಡಿದರಾಯಿತು ಎನ್ನದೇ ಈಗಿನಿಂದಲೇ ಓದುವುದನ್ನು ಪ್ರಾರಂಭಿಸಿ ವಿಷಯ ವಿಂಗಡನೆ ಮಾಡಿ, ಗುಂಪು ಚರ್ಚೆಯೊಂದಿಗೆ, ಪುನರಾವರ್ತನೆ ಮಾಡುತ್ತಾ ಓದಿ ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ನೆಹರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ. ಆರ್‌. ರಾಠೋಡ ಮಾತನಾಡಿ, ಕವಿವ ಸಂಘವು ಪರೀಕ್ಷಾ ಪೂರ್ವ ಸಿದ್ದತೆ ಕಾರ್ಯಕ್ರಮ ನಮ್ಮ ಹಳ್ಳಿ ವಿದ್ಯಾರ್ಥಿಗಳಿಗೆ ಏರಿ​‍್ಡಸಿದ್ದು ಅಭಿನಂದನೀಯ. ಸಂಘದ ಒಂದು ಪ್ರಯತ್ನ ನಮ್ಮ ಮಕ್ಕಳಿಗೆ ಖಂಡಿತಾ ಫಲ ಸಿಗುತ್ತದೆ ಎಂದರು. 

ಉಪನ್ಯಾಸಕರಾದ ಈರಣ್ಣ ಹುಬ್ಬಳ್ಳಿ ಸ್ವಾಗತಿಸಿ, ನಿರೂಪಿಸಿದರು. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶ್ರೀಕಾಂತ ಯಲಿಗಾರ ವಂದಿಸಿದರು. ಎಂ.ಜಿ ಸುಬೇದಾರ, ಪ್ರೊ. ಸಿ. ಕೆ. ದೇಸಾಯಿ ಹಾಗೂ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಮುಂತಾದವರಿದ್ದರು.