ಭಾರತದಿಂದ ಮಾರಿಷಸ್‍ಗೆ ಎರಡನೇ ಕಂತಿನ ಅಗತ್ಯವಸ್ತು, ಔಷಧಗಳ ರವಾನೆ

ನವದೆಹಲಿ, ಮೇ 24, ಕೊವಿಡ್‍-19 ಪರಿಹಾರ ಕಾರ್ಯಗಳಿಗೆ ನೆರವಾಗಲು ಐಎನ್‍ಎಸ್ ಕೇಸರಿ ನೌಕೆ ಮೂಲಕ ಭಾರತದಿಂದ ಎರಡನೇ ಕಂತಿನ ಔಷಧ ಮತ್ತು ಅಗತ್ಯ ವಸ್ತುಗಳ ಸಾಮಗ್ರಿ ಮಾರಿಷಸ್‍ಗೆ ತಲುಪಿದೆ. ಪೋರ್ಟ್‍ ಲೂಯಿಸ್‍ನಲ್ಲಿ ನಿನ್ನೆ ಮಾರಿಷಸ್ ಸರ್ಕಾರದ ಪರವಾಗಿ ಆರೋಗ್ಯ ಸಚಿವ ಕೈಲಾಶ್‍ ಜಗುತ್‍ಪಾಲ್‍ ಅವರು ಸಾಮಾಗ್ರಿಯನ್ನು ಸ್ವೀಕರಿಸಿದರು. ಔಷಧ ಸಾಮಗ್ರಿಯಲ್ಲಿ 10 ಟನ್‍ ಆಯುರ್ವೇದ ಔಷಧಗಳೂ ಸೇರಿವೆ. ಐಎನ್‍ಎಸ್‍ ಕೇಸರಿ ನೌಕೆಯಲ್ಲಿ ವೈದ್ಯಕೀಯ ನೆರವು ತಂಡ ಸಹ ತೆರಳಿದೆ. ಮಾರಿಷಸ್‍ ನಲ್ಲಿ ಆರೋಗ್ಯ ಆಡಳಿತದೊಂದಿಗೆ ಈ ತಂಡ ಕೆಲಸ ಮಾಡಲಿದ್ದು, ಪರಿಣಿತಿ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲಿದೆ. ಆರೋಗ್ಯ ಕ್ಷೇತ್ರದಲ್ಲಿ ಭಾರತ-ಮಾರಿಷಸ್‍ ನಡುವಿನ ದೀರ್ಘಕಾಲೀನ ಪಾಲುದಾರಿಕೆ ಭಾಗವಾಗಿ ಔಷಧ ಸಾಮಗ್ರಿ, ಮತ್ತು ವೈದ್ಯಕೀಯ ನೆರವನ್ನು ಭಾರತ ಕಳುಹಿಸುತ್ತಿದೆ. ನಿನ್ನೆ ಪ್ರಧಾನಿ ನರೇಂದ್ರಮೋದಿ ಅವರು ಮಾರಿಷಸ್‍ ಪ್ರಧಾನಿ ಪ್ರವಿಂದ್ ಜುಗ್ನೊತ್‍ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿ, ಕೊವಿಡ್‍-19 ವಿರುದ್ಧದ ಹೋರಾಟಕ್ಕೆ ಎಲ್ಲ ನೆರವಿನ ಭರವಸೆ ನೀಡಿದ್ದಾರೆ.