ಹಾಳಾದ ಇತಿಹಾಸ ಪ್ರಸಿದ್ಧ ಮಸೂಬಾ ಹಳ್ಳದ ಅಭಿವೃದ್ಧಿ ಮಾಡಲಿ: ತೋಡಕರ

ಇತಿಹಾಸ ಪ್ರಸಿದ್ಧ ಮಸೂಬಾ ಹಳ್ಳದ ತ್ಯಾಜ್ಯ ತುಂಬಿ ಹಾಳಾಗಿರುವುದು


 ಅಥಣಿ 09: ಅಥಣಿ ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಮಸೂಬಾ ಹಳ್ಳವು ಅನೇಕ ವರ್ಷಗಳ ಕಾಲ ಮೈದುಂಬಿ ಹರಿದು ಅಥಣಿಗೆ ಹೆಮ್ಮೆಯನ್ನು ತಂದು ಕೊಟ್ಟಿರುವಂತಹ ಐತಿಹಾಸಿಕ ಸುಪ್ರಸಿದ್ಧ ಹಳ್ಳವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದರಲ್ಲಿ ತ್ಯಾಜ್ಯ ಎಸೆದು ಅದನ್ನು ಹಾಳು ಮಾಡಿದ್ದು ಅಂತವರ ವಿರುದ್ಧ ಅಥಣಿ ಪುರಸಭೆ ಹಾಗೂ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಥಣಿ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ ಆಕ್ರೋಶ ವ್ಯಕ್ತಪಡಿಸಿದರು.

 ಅವರು ಸ್ಥಳೀಯ ತಮ್ಮ ನಿವಾಸದಲ್ಲಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸುತ್ತಾ ನಾವು ಚಿಕ್ಕವರಿದ್ದಾಗ ನಾವೆಲ್ಲ ಆ ಹಳ್ಳದಲ್ಲಿ ಈಜಾಡಲು ಹೋಗುತ್ತಿದ್ದೆವು, ಮತ್ತು ಹಲವಾರು ಜನ ತಮ್ಮ ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಅವುಗಳ ಮೈ ತೊಳೆಯಲು ಕೂಡ ಇದೇ ಮಸೂಬಾ ಹಳ್ಳದ ನೀರನ್ನೆ ಬಳಸುತ್ತಿದ್ದರು. ಆವಾಗ ಅಷ್ಟು ಚನ್ನಾಗಿ ಇದ್ದ ನೀರು ಹಾಗೂ ಹಳ್ಳವು ಇತ್ತೀಚಿನ ದಿನಗಳಲ್ಲಿ ಅದರ ಮೇಲುಸ್ತುವಾರಿಯ ಕೊರತೆಯಿಂದಾಗಿ ಇಂದು ಆ ಹಳ್ಳದಲ್ಲಿ ಕತ್ತರಿಸಿದ ಕೋಳಿಯ ಮಾಂಸ ಮತ್ತು ರೆಕ್ಕೆ ಪುಕ್ಕಗಳು, ಹಳೆಯ ಬಟ್ಟೆ, ಕಸ ಕಡ್ಡಿ, ಗ್ಯಾರೇಜನ ತ್ಯಾಜ್ಯ, ಹಳ್ಳದ ಸುತ್ತಮುತ್ತಲಿನ ಮನೆಗಳ ಮಲ-ಮೂತ್ರ ತ್ಯಾಜ್ಯವನ್ನು ಹಳ್ಳಕ್ಕೆ ಬಿಟ್ಟು ಅದರ ಅಂದವನ್ನು ಹಾಳು ಮಾಡುತ್ತಿದ್ದಾರೆ. ಹೀಗೆಯೆ ಮುಂದುವರೆದರೆ ನಮ್ಮ ಮುಂದಿನ ಜನಾಂಗದ ಪೀಳಿಗೆಗೆ ನಾವು ವಿಷಯುಕ್ತ ನೀರು ಮತ್ತು ಮಲೀನಯುಕ್ತ ಹಳ್ಳದ ವಾತಾವರಣವನ್ನು ನೀಡಿದಂತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

  ನೀರಿನ ಮೂಲಗಳಾದ ಒಂದು ಸಣ್ಣ ಬಾವಿಯಿಂದ ಕೆರೆ ಹೊಳೆ-ಹಳ್ಳ ನದಿ ಮೊದಲಾದವುಗಳು ನಮ್ಮ ಹಿರಿಯರು ಅಂದರೆ ಪೂರ್ವಜರು ನಮಗೆ ನೀಡಿದ ಕೊಡುಗೆಗಳಾಗಿವೆ. ಆಸ್ತಿಗಳಾಗಿವೆ. ಅವನ್ನು ಯಥಾಸ್ಥಿತಿಯಲ್ಲಿ ಜೋಪಾನವಾಗಿಟ್ಟು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದರೆ ಇವುಗಳನ್ನು ಹಾಳು ಮಾಡಿ ಇಲ್ಲದಂತೆ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ನಮ್ಮ ಸರಕಾರವು ಅನೇಕ ಸ್ವಚ್ಛತೆಯ ಕಾರ್ಯಕ್ಕಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು ಅದನ್ನು ಬಳಸಿಕೊಂಡು ಪುರಸಭೆಯವರು ಅಭಿವೃದ್ಧಿ ಮಾಡಬಹುದಿತ್ತು. ಆದರೆ ಅವರು ಹಳ್ಳದ ಅಭಿವೃದ್ಧಿಯನ್ನು ಮರೆತುದರ ಪರಣಾಮವಾಗಿ ನಾವಿಂದು ಈ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ನಂತರ ಮಹಾತ್ಮಾ ಜ್ಯೋತಿಬಾ ಫುಲೆ ಯುವ ಸರ್ಕಲ್ ಕಮೀಟಿ ಅಧ್ಯಕ್ಷ ರವಿ ಬಡಕಂಬಿ ಮಾತನಾಡುತ್ತಾ ಇದೇ ರೀತಿಯಾಗಿ ಎಲ್ಲಾ ಅಥಣಿಯ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಸುಮ್ಮನೆ ಕುಳಿತರೆ ಇತಿಹಾಸ ಪ್ರಸಿದ್ಧ ಮಸೂಬಾ ಹಳ್ಳವು ಹಾಳಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ನಾವೆಲ್ಲ ಒಗ್ಗಟ್ಟಾಗಿ ಅಥಣಿ ಪುರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಹಳ್ಳದ ಅಭಿವೃದ್ಧಿಯನ್ನು ಮಾಡೋಣ, ಒಂದು ವೇಳೆ ಪುರಸಭೆಯ ವತಿಯಿಂದ ಕೆಲಸವು ಸಾಗದೇ ಇದ್ದರೆ ತೀವ್ರವಾಗಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಲಕ್ಷ್ಮಣ ಬಡಕಂಬಿ. ಮಹಾಂತೇಶ ಮಾಳಿ, ಮಾರುತಿ ಸವದತ್ತಿ, ಸದಾಶಿವ ಬಡಕಂಬಿ, ರಾಹುಲ ಲಗಳಿ, ವಿನಾಯಕ ಕಬಾಡಗಿ, ಈಶ್ವರ ಮಾಳಿ, ಬಸವರಾಜ ಹಳ್ಳದಮಳ, ಸಂಜಯ ಬಕಾರಿ, ರಮೇಶ ಮಾಳಿ, ಅಮೀತ ಕುಬಸದ, ಪ್ರಮೋದ ದೇಸಾಯಿ, ಪ್ರಮೋದ ಬಿಳ್ಳೂರ ಹಾಗೂ ಮುಂತಾದವರು ಉಪಸ್ಥಿತರಿದ್ದರು.