ಲೋಕದರ್ಶನ ವರದಿ
ಕೊಪ್ಪಳ 07: ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಹಿರಿಯರು ನನಗೆ ದೊರಕಿಸಿಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಬಾಯಿಸುತ್ತೇನೆಂದು ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ನೂತನ ಅಧ್ಯಕ್ಷ ಎಂ.ಡಿ.ಜಹೀರ್ ಅಲಿ ಹೇಳಿದರು.
ಅವರು ಮಿಲ್ಲತ್ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಶಿಕ್ಷಕವೃಂದದವರಿಂದ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭ ಮತ್ತು ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಹೆಚ್ಚಿನ ಕಾಳಜಿವಹಿಸಬೇಕು. ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸಿದರೆ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಬೇಕು. ಆಡಳಿತ ಮಂಡಳಿ ಶಿಕ್ಷಕರು ಮತ್ತು ಪಾಲಕರು ಸೇರಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ನೂತನ ಅಧ್ಯಕ್ಷ ಎಂ.ಡಿ.ಜಹೀರ್ ಅಲಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಎಂ. ಸಾದಿಕ ಅಲಿ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಅಬ್ದುಲ್ ಅಜೀಜ್ ಮಾನ್ವೀಕರ್ ಸೇರಿದಂತೆ ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದು, ಮುಖ್ಯ ಶಿಕ್ಷಕ ಮಹ್ಮದ್ ಅಜೀಜ್ ರೇವಡಿರವರು ಆರಂಭದಲ್ಲಿ ಸ್ವಾಗತಿಸಿ ಎಲ್ಲಾ ಶಿಕ್ಷಕರ ಪರವಾಗಿ ನೂತನ ಅಧ್ಯಕ್ಷರಿಗೆ ಸನ್ಮಾನಿಸಿ ಸ್ವಾಗತಿಸಿಕೊಂಡರು.