ಕೊಪ್ಪಳ24: ಪ್ರಸಕ್ತ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮ ಪಂಚಾಯತ್ ಪುನಃ ಪ್ರಾರಂಭಿಸಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳೆಬಾವಿ, ನಾಗೇಶನಹಳ್ಳಿ ಗ್ರಾಮದಲ್ಲಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ಬೂದಗುಂಪಾ ಗ್ರಾಮ ಪಂಚಾಯತಿಯಿಂದ ಪ್ರಾರಂಭಿಸಲಾಗಿರುತ್ತದೆ.
ಪ್ರತಿ ಕೆರೆ ಕಾಮಗಾರಿಯನ್ನು 4 ಭಾಗಗಳಾಗಿ ವಿಂಗಡಿಸಿ ಪ್ರತಿ ಕಾಮಗಾರಿಗೆ ಅಂದಾಜು ಮೊತ್ತ ರೂ. 10 ಲಕ್ಷ ಮೀಸಲಿಟ್ಟಿದ್ದು, ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಲ್ಪಿಸಿದೆ. 20 ರಿಂದ 25 ಜನ ಕೂಲಿಕಾರರಿಗೆ ಒಬ್ಬ ಕಾಯಕ ಬಂಧುವನ್ನು ನೇಮಿಸಲಾಗಿದ್ದು, ಒಟ್ಟು 15 ಕಾಯಕ ಬಂಧುಗಳು ನಿರಂತರವಾಗಿ ಕಾಮಗಾರಿಯಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುವ ಮಾಹಿತಿ, ಅವರ ಹಾಜರಾತಿ ಪಡೆಯುವದು, ಅಳತೆ ಪಡೆಯುವದು ಅವರ ಕೂಲಿ ಪಾವತಿ ಅಲ್ಲದೇ ಅವರಿಗೆ ಸಮರ್ಪಕವಾಗಿ ಕೂಲಿ ಹಣ ದೊರೆಯಲು ಅವರು ಗ್ರಾಮ ಪಂಚಾಯತಿಯ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಪ್ರಸಕ್ತದಲ್ಲಿ ಕೂಲಿ ಪ್ರತಿ ದಿನಕ್ಕೆ ರೂ.249/-ಇದ್ದು ಅವರ ಸಲಕರಣೆಗಳ ಹರಿತಗೊಳಿಸಲು ರೂ.10/-ಪ್ರತ್ಯೇಕವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ.
ಕಾಮಗಾರಿಯಲ್ಲಿ ಬಿಳೆಬಾವಿ, ನಾಗೇಶನಹಳ್ಳಿ, ಬೂದಗುಂಪಾ ಗ್ರಾಮಗಳ ಸೇರಿ ಒಟ್ಟು 654 ಕೂಲಿಕಾರರು ನಿರಂತರವಾಗಿ ಕಳೆದ 3 ತಿಂಗಳಿಂದ ಕೂಲಿ ಕೆಲಸ ನಿರ್ವಹಿಸುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರರಿಗೆ ಕೆಲಸ ಒದಗಿಸಿದೆ.
ಪ್ರಸಕ್ತ ಸಾಲಿನಲ್ಲಿ ಏಪ್ರೀಲ್ ರಿಂದ ನವೆಂಬರ್. 22 ರವರೆಗಿನ ಮಾನವ ದಿನಗಳ ಸೃಜನೆಯ ಗುರಿ-18693 ಇರುತ್ತದೆ. ಬೂದಗುಂಪಾ ಗ್ರಾಮ ಪಂಚಾಯತಿಯಲ್ಲಿ 1860 ಜಾಬಕಾರ್ಡದಾರರನ್ನು ಹೊಂದಿದ್ದು, 754 ಕುಟುಂಬಗಳಿಗೆ (1374 ವ್ಯಕ್ತಿಗಳು) ಕೂಲಿ ಕೆಲಸ ನೀಡಿದ್ದು, ರೂ. 106.63 ಲಕ್ಷ ಖಚರ್ಾಗಿದ್ದು ಇಲ್ಲಿಯವರೆಗೆ ಒಟ್ಟು 29614 ಮಾನವ ದಿನಗಳ ಕೆಲಸ ನೀಡಲಾಗಿದೆ (ಎಸ್.ಸಿ-3758,ಎಸ್.ಟಿ-1698, ಇತರೇ-24158) 08 ಕುಟುಂಬಗಳಿಗೆ 100 ಮಾನವ ದಿನಗಳ ಕೆಲಸ ನೀಡಲಾಗಿದೆ.
ಗ್ರಾಮ ಪಂಚಾಯತಿಯಲ್ಲಿ 15742 ಮಾನವ ದಿನಗಳನ್ನು ಮಹಿಳೆಯರಿಂದ ಸೃಜಿಸಲಾಗಿದೆ. ಕೊಪ್ಪಳ ತಾಲೂಕಿನಲ್ಲಿ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ 2ನೇ ಗ್ರಾಮ ಪಂಚಾಯತಿಯಾಗಿದೆ ಬೂದಗುಂಪಾ ಎಂದು ಪಂಚಾಯತ ಅಭಿವೃದ್ದಿ ಅಧಿಕಾರಿ ತಿಳಿಸಿದ್ದಾರೆ.