ಜನರನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿಸುವುದೇ ಮಠಗಳ ಉದ್ದೇಶ: ಶಂಕರ್

ರಾಣೇಬೆನ್ನೂರು ಜು.8:  ಎಲ್ಲ ನದಿಗಳು ಸಾಗರವನ್ನು ಸೇರುವಂತೆ ಎಲ್ಲ ಮಠಗಳ ಉದ್ದೇಶ ಜನರನ್ನು ಅಜ್ಞಾನದಿಂದ ಸುಜ್ಞಾನದಡೆ ಕೊಂಡೊಯ್ಯುವುದೇ ಆಗಿದೆ, ಅದರಲ್ಲೂ ಹುಬ್ಬಳ್ಳಿಯ ಶ್ರೀಸಿದ್ಧಾರೂಢರು ಅಗ್ರಗಣ್ಯರು ಎಂದು ಪೌರಾಡಳಿತ ಸಚಿವ ಆರ್.ಶಂಕರ ಹೇಳಿದರು. 

     ತಾಲೂಕಿನ ಐರಣಿ ಹೊಳೆಮಠದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ 35ನೇ ಪುಣ್ಯಾರಾಧನೆ ಹಾಗೂ ಶ್ರೀಮಠದ ಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. 

  ಶ್ರೀಮಠದ ಬಸವರಾಜ ದೇಶಿಕೇಂದ್ರ ಸ್ವಾಮಿಜಿ, ಹದಡಿ ಚಂದ್ರಗಿರಿ ಮಠದ ಮುರಳಿಧರ ಸ್ವಾಮಿಜಿ, ದಾವಣಗೇರಿಯ ಜಡಿಸಿದ್ದೇಶ್ವರ ಆಶ್ರಮದ ಶಿವಾನಂದ ಸ್ವಾಮಿಜಿ,  ಕುಳ್ಳೂರಿನ ಸಿದ್ಧಾರೂಢ ಮಠದ ಬಸವಾನಂದ ಭಾರತಿ ಸ್ವಾಮಿಗಳು, ತೆಲಗಿಯ ಶಂಭುಲಿಂಗಾಶ್ರಮದ ಪೂಣರ್ಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು. 

     ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹದಲ್ಲಿ 12 ಜೋಡಿ ನವದಂಪತಿಗಳು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ನವವಿವಾಹಿತರಿಗೆ ಶ್ರೀಮಠದ ವತಿಯಿಂದ ಸಸಿಗಳನ್ನು ವಿತರಿಸಲಾಯಿತು.

      ನ್ಯಾಯವಾದಿ ಎಸ್.ಎಸ್. ರಾಮಲಿಂಗಣ್ಣನವರ, ಬಸವರಾಜ ಪಾಟೀಲ, ಧನಲಕ್ಷ್ಮೀ ಆರ್. ಶಂಕರ, ಕಲಾವಿದ ರಾಮಣ್ಣ ಇದ್ದರು. ಬಾಬಣ್ಣ ಶೆಟ್ಟರ ಸೇರಿದಂತೆ ಮತ್ತಿತರ ಗಣ್ಯರು ಭಕ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನೂತನ ದಂಪತಿಗಳಿಗೆ ಪರಿಕರಗಳನ್ನು ವಿತರಿಸಿ ಗೌರವಿಸಲಾಯಿತು.