ಮಂಡ್ಯ. ನ 15 : ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಾನತೆಯನ್ನು ಬೋಧಿಸಿದ ಕನಕದಾಸರು ಈ ನಾಡು ಕಂಡ ಅಪರೂಪದ ಶ್ರೇಷ್ಠ ಸಂತ ಎಂದು ವಿಶ್ವ ಮಾನವ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಜಿ.ಡಿ.ಶಿವರಾಜ್ ಹೇಳಿದ್ದಾರೆ.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕಂತಿ ಇಲಾಖೆಯಿಂದ ಆಯೋಜಿಸಲಾದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ 16 ನೇ ಶತಮಾನವನ್ನು ಸಂತ ಶ್ರೇಷ್ಠರ ಶತಮಾನ ಎಂದು ಕರೆದಿದ್ದಾರೆ. ಅಂತಹ ಕಾಲಘಟ್ಟದಲ್ಲಿ ರಾಮಧಾನ್ಯ ಚರಿತೆ, ಮೋಹನತರಂಗಿಣಿ, ನಳಚರಿತೆ ಹಾಗೂ ಹರಿಭಕ್ತಸಾರದಂತಹ ಕಾವ್ಯ, ಕೀರ್ತನೆಗಳನ್ನು ರಚಿಸಿದ ಕನಕ ದಾಸಸರು ಶ್ರೇಷ್ಠ ದಾಸವರೇಣ್ಯರು ಎಂದರು.
ಕನಕದಾಸರ ಸಾಹಿತ್ಯ ಹಾಗೂ ಕೀರ್ತನೆಗಳನ್ನು ಮನನ ಮಾಡಿಕೊಂಡು ಅವರ ಆದರ್ಶ ಹಾಗೂ ಚಿಂತನೆಗಳನ್ನು ಯುವಪೀಳಿಗೆಗೆ ತಲುಪಿಸಬೇಕು. ದಾಸರು ಕಟ್ಟಿಕೊಟ್ಟ ನಿಲುವುಗಳನ್ನು ಧಾರ್ಮಿಕ, ಸಾಮಾಜಿಕ, ಸಾಹಿತ್ಯ ಮತ್ತು ಭಕ್ತಿಯ ನೆಲೆಗಟ್ಟಿನಲ್ಲಿ ನೋಡಬೇಕು ಎಂದು ಹೇಳಿದರು.
ಬಸವಣ್ಣ, ಕನಕದಾಸ, ಕುವೆಂಪು, ಅಂಬೇಡ್ಕರ್, ವಾಲ್ಮೀಕಿ ಹಾಗೂ ಹಲವಾರು ಮಹಾನೀಯರನ್ನ ಜಾತಿ ಎಂಬ ಸಂಕೋಲೆಯಲ್ಲಿ ಕಟ್ಟಿ ಹಾಕಿದ್ದೇವೆ. ಆದರೆ ಅವರು ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದರು. ಕನಕದಾಸರು ಶ್ರೀಮಂತ ಸಾಹಿತ್ಯ, ಧಾರ್ಮಿಕ ಚಿಂತನೆ, ಭಕ್ತಿಯ ರಸಾಮೃತ ಮತ್ತು ಸಮಾನತೆ ತತ್ವವನ್ನು ಭೋದಿಸಿರುವುದು ಅಂದಿಗೆ ಮಾತ್ರ ಸೀಮಿತವಲ್ಲ, ಅದು ಸಾರ್ವಕಾಲಿಕವಾಗಿದೆ. ಹೀಗಾಗಿ ಅವುಗಳನ್ನು ನಮ್ಮ ಜೀವನದ ಆದರ್ಶಗಳಾಗಿ ಸ್ವೀಕರಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಕನಕದಾಸರು ಸಮಾಜದಲ್ಲಿನ ಕಂದಚಾರ, ಅಸಮಾನತೆ, ಭೇದಭಾವ ಹಾಗೂ ಅಂಕುಡೊಂಕುಗಳ ಬಗ್ಗೆ ಕಾವ್ಯಗಳನ್ನು ರಚಿಸುವ ಮೂಲಕ ಸಮಾಜವನ್ನು ತಿದ್ದಿ ತೀಡಿದ್ದಾರೆ. ಸಮಾಜದಲ್ಲಿನ ಅಂಧಕಾರವನ್ನು ತಿದ್ದಲು ಪ್ರತಿಯೊಂದು ಮನೆಯನ್ನು ಅನುಭವ ಮಂಟಪವನ್ನಾಗಿ ಮಾಡಿಕೊಂಡು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅರಿವು ಮೂಡಿಸಿದ್ದಾರೆ ಎಂದು ಹೇಳಿದರು.
ರಾಮಾಧಾನ್ಯಚರಿತೆಯ ಮೂಲಕ ರಾಗಿ ಶ್ರೇಷ್ಠವೆಂದು ತಿಳಿಸುವ ಮೂಲಕ ಶೋಷಿತರ ಹಾಗೂ ಅಸಮಾನತೆಗೆ ಒಳಗಾದವರ ಪರವಾಗಿ ನಾವು ಇದ್ದೇವೆ ಎಂದು ತೋರಿಸಿದ್ದಾರೆ. ಜತೆಗೆ ನಳಚರಿತೆಯಲ್ಲಿ ಆದರ್ಶದಾಂಪತ್ಯದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರ ಆದರ್ಶ, ತತ್ವ ಜ್ಞಾನ ಕೇವಲ ಪುಸ್ತಕಕ್ಕೆ ಸೀಮಿತವಾಗದೇ, ನಮ್ಮ ಬದುಕಿಗೆ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜವನ್ನು ಕಟ್ಟೋಣ ಎಂದು ಹೇಳಿದರು.