ರಾಣೇಬೆನ್ನೂರು14: ಶತಮಾನದ ಇತಿಹಾಸವುಳ್ಳ ಸ್ಥಳೀಯ ಗ್ರಾಮ ದೇವತೆ ಶ್ರೀ ಗಂಗಾಜಲ ಚೌಡೇಶ್ವರಿ ದೇವಿ ಜಾತ್ರೆಯ ನಿಮಿತ್ಯ ಮುನ್ನಾದಿನ ನಡೆಯುವ ದೇವಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ಸೋಮವಾರ ರಾತ್ರಿ ಭಕ್ತಸಾಗರದ ಮಧ್ಯ ಭಕ್ತಿ, ಭಾವ, ಶ್ರದ್ಧೆಯಿಂದ ಅದ್ಧೂರಿಯಾಗಿ ನೆರವೇರಿತು.
ಇಲ್ಲಿನ ತಳವಾರ ಗಲ್ಲಿಯ ಮೂಲ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಗೆ ಶಾಸಕ ಅರುಣಕುಮಾರ ಪೂಜಾರ ಅವರು ಚಾಲನೆ ನೀಡಿದರು. ನೂರಾರು ವರ್ಷಗಳ ಭವ್ಯ ಇತಿಹಾಸವುಳ್ಳ ಈ ಗಂಗಾಜಲ ಜಾತ್ರೆಗೆ ಸರ್ವಧರ್ಮದವರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಂತಹ ಜಾತ್ರೆಗಳಿಂದ ಇನ್ನು ಭಾವೈಕ್ಯತೆಯನ್ನು ನೆಲೆಯೂರಿದೆ ಎಂದರು.
ಪ್ರಕಾಶ ಕೋಳಿವಾಡ, ರಾಮಣ್ಣ ಕೋಲಕಾರ, ಭಾರತಿ ಜಂಬಿಗಿ, ಕೆ.ಎನ್.ಕೋರದಾನ್ಯಮಠ, ಹನುಮಂತಪ್ಪ ಚಳಗೇರಿ, ಶಶಿಧರ ಬಸೇನಾಯ್ಕರ, ಶೇರೂಖಾನ್ ಕಾಬೂಲಿ, ಭೀಮಣ್ಣ ಎಡಚಿ, ಭಾರತಿ ಅಳವಂಡಿ, ಏಕನಾಥ ಬಾನುವಳ್ಳಿ, ನಾಗರಾಜ ಅಡ್ಮನಿ, ಇಫರ್ಾನ್ ದಿಡಗೂರ, ನಾಗರಾಜ ಮಾಕನೂರ, ಉಮೇಶ ಹೊನ್ನಾಳಿ, ನಿತ್ಯಾನಂದ ಕುಂದಾಪುರ, ಚಂದ್ರಣ್ಣ ಸೊಪ್ಪಿನ, ಗಂಗಾಧರ ಬಣಕಾರ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಸಂಘ-ಸಂಸ್ಥೆಯ ಮುಖಂಡರು, ನಗರಸಭಾ, ಜಿಪಂ, ತಾಪಂ, ಎಪಿಎಂಸಿ ಹಾಲಿ-ಮಾಜಿ ಸದಸ್ಯರು, ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು, ನಗರದ ನಾಗರೀಕರು ಪಾಲ್ಗೊಂಡಿದ್ದರು.
ಮೆರವಣಿಗೆಯುದ್ದಕ್ಕೂ ಡೊಳ್ಳು, ಸಮಾಳ, ವೀರಗಾಸೆ, ನಗಾರಿ ವಾದ್ಯ, ಕರಡಿ ಮಜಲು, ಶಹನಾಯಿ ವಾದನ, ಕಹಳೆ, ಭಜನೆ, ಲಂಬಾಣಿ ನೃತ್ಯ, ಕೋಲಾಟ, ಹಲಗೆ, ಕಣಿ ವಾದನ, ಲೆಜಿಮ್, ಜಗ್ಗಲಿಗೆ ಕುಣಿತ, ಜಾಂಜ್, ಕೀಲು ಕುದುರೆ ಕುಣಿತ ಸೇರಿದಂತೆ ಅನೇಕ ಜಾನಪದ ವಾದ್ಯ ಕಲಾ ತಂಡಗಳು ಭಕ್ತರ ಗಮನ ಸೆಳೆಯುವುದರ ಮೂಲಕ ಮೆರವಣಿಗೆಗೆ ಸಾಥ್ ನೀಡಿದವು.
ವೈವಿಧ್ಯಮಯ ಪಟಾಕಿಗಳು ಜನರಮನ ತಣಿಸಿದವು. ದೇವಿಯು ಸಾಗುವ ಮಾರ್ಗಗಳಲ್ಲಿ ಭಕ್ತರು ರಸ್ತೆ, ಓಣಿ, ಬಡಾವಣೆಗಳಲ್ಲಿಯೂ ನೀರು ಸಿಂಪಡಿಸಿ, ಬಣ್ಣಗಳಿಂದ ರಂಗೋಲಿ ಚಿತ್ತಾರ ಬಿಡಿಸಿ, ತಳಿರು ತೋರಣಗಳಿಂದ ಶೃಂಗಾರಗೊಳಿಸಿ ಸ್ವಾಗತಿಸುತ್ತಿದ್ದುದು ಸಾಮಾನ್ಯವಾಗಿತ್ತು. ನಗರದಾದ್ಯಂತ ರಾತ್ರಿಯಿಡಿ ಸಂಚರಿಸಿದ ಮೆರವಣಿಗೆಯು ಮಂಗಳವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಮೇಡ್ಲೇರಿ ರಸ್ತೆಯ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು.