ಗುಳೇಗುಡ್ಡ17: ಗ್ರಾಮೀಣ ಪ್ರದೇಶದ ಬಡ ರೈತರು, ಕೂಲಿ ಕಾರ್ಮಿಕರು , ಹಿಂದುಳಿದ ವರ್ಗದವರು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿತಾಗ ಮತ್ತು ಹಕ್ಕುಗಳ ಬಗ್ಗೆ ತಿಳಿದುಕೊಂಡಾಗ ಸೌಲಭ್ಯ ಪಡೆಯುವುದರೊಂದಿಗೆ ಬದುಕಿನಲ್ಲಿ ಬದಲಾವಣೆ ಕಾಣಲು ಸಾಧ್ಯವೆಂದು ಬಾಗಲಕೋಟೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಅವರು ಗುರುವಾರ ಗುಳೇದಗುಡ್ಡ ತಾಲೂಕಿನ ಕೆಲವಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತೆಗ್ಗಿ ಗ್ರಾಮದ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಐಇಸಿ ಕಾರ್ಯಕ್ರಮದ ಯೋಜನೆಯಡಿ ರೋಜಗಾರ ದಿನಾಚರಣೆ ಮತ್ತು ಕೂಲಿ ಕಾರ್ಮಿಕರೊಂದಿಗೆ ಸಂಕ್ರಮಣ ಹಬ್ಬವನ್ನು ಸಿಹಿ ಹಂಚುವುದರ ಮೂಲಕ ಆಚರಣೆ ಮಾಡಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಕ್ಕೆ ಒಂದು ಕುಟುಂಬಕ್ಕೆ ನೂರು ದಿನ ಕೂಲಿ ಕೊಡುವ ಯೋಜನೆ ಇದ್ದರೂ ಈ ಬಾರಿ ನೆರೆ ಬಂದ ಪ್ರಯುಕ್ತ 150 ದಿನ ಕೂಲಿಯ ಅವಕಾಶವನ್ನು ಸಕರ್ಾರ ಮಾಡಿಕೊಟ್ಟಿದೆ. ನಮ್ಮ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಹೆಚ್ಚಿನ ದಿನಗಳ ಕೆಲಸ ಒದಗಿಸಿದೆ. ಯಾರಿಗೆ ಉದ್ಯೋಗ ಸಿಕ್ಕಿಲ್ಲ ಎಂದು ಹೇಳುವ ಕೆಲವು ಜನ ಗ್ರಾಮ ಪಂಚಾಯತಿಗೆ ಹೋಗಿ ಕೆಲಸ ಪಡೆಯಿರಿ. ಹೆಚ್ಚು ಹೆಚ್ಚಾಗಿ ಜನ ಕೆಲಸಕ್ಕೆ ಬನ್ನಿ. ಯಾಕೆಂದರೆ ಈ ಭಾಗದಲ್ಲಿ ಬಡತನ ಇದೆ. ಹೊರಗಡೆ ಹೋಗಿ ತೊಂದರೆ ಅನುಭವಿಸುವುದಕ್ಕಿಂತ ಇಲ್ಲೇ ಇದ್ದುಕೊಂಡು ಸರ್ಕಾರದ ವಿವಿಧ ಸೌಲಭ್ಯಗಳಾದ ನರೇಗಾ ಯೋಜನೆಯ ಪ್ರಯೋಜನ, ಆರೋಗ್ಯದ ಆಯುಷ್ಯಮಾನ ಭಾರತ್ ಕಾರ್ಡ್ ನ ಪ್ರಯೋಜನ, ರೈತರಿಗಾಗಿ ಬಂದಿರುವ ಹಲವಾರು ಸಮಾಜಿಕ ಭದ್ರತೆ ಹಾಗೂ ಕೃಷಿ ಯೋಜನೆಗಳು, ವಿಧವಾ ವೇತನ, ಪರಿಶಿಷ್ಟ ಜಾತಿ, ಪಂಗಡದವರಿಗೆ ಜಮೀನು ಖರೀದಿಗೆ ಸರ್ಕಾರದಿಂದ ಸಿಗುವ 15 ಲಕ್ಷ ರೂ.ವರೆಗಿನ ಸಹಾಯಧನ, ದೇವದಾಸಿ ಮಕ್ಕಳಿಗೆ ಅಂತರ್ಜಾತಿ ವಿವಾಹದಿಂದ ಸಿಗುವ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಪಡೆಯಿರಿ ಎಂದರು.
ಬಾದಾಮಿ ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಡಾ.ಪುನೀತ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಎಂ.ಕಾಳಗಿ, ಎಡಿಪಿಸಿ ನಾಗರಾಜ್, ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಬಸವರಾಜ ಔರಸಂಗ್ ಸೇರಿದಂತೆ 284 ಜನ ಕೂಲಿ ಕಾರ್ಮಿಕರು , ತಾಲೂಕಾ ಮಟ್ಟದ ಪಂಚಾಯತ್ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.