ಬೆಂಗಳೂರು, ಜು 22 ಶಾಸಕಾಂಗ ಪಕ್ಷದ ನಾಯಕನಿಗೆ ತಮ್ಮ ಪಕ್ಷದ ಶಾಸಕರು ಸದನಕ್ಕೆ ಹಾಜರಾಗುವಂತೆ ಸೂಚಿಸುವ ಅಧಿಕಾರವಿದೆ. ಸಂವಿಧಾನದ ಶೆಡ್ಯೂಲ್ 10ರಲ್ಲಿ ಇರುವ ಈ ಜವಾಬ್ದಾರಿಯನ್ನು ಮೊಟಕುಗೊಳಿಸುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ. ವಿಧಾನಸಭೆಯಲ್ಲಿ ಇಂದು ಬೆಳಗ್ಗೆ ಕಲಾಪ ಆರಂಭದ ವೇಳೆ ಮಾತನಾಡಿದ ಅವರು, ಸುಪ್ರೀಂಕೋರ್ಟ ಇತ್ತೀಚೆಗೆ ನೀಡಿದ್ದ ಆದೇಶದಲ್ಲಿ ಗೊಂದಲಗಳಿವೆ, ಶಾಸಕಾಂಗ ಪಕ್ಷದ ನಾಯಕನ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪವೆತ್ತಿದ್ದರು. ಈ ಬಗ್ಗೆ ತಾವು ಅಡ್ವೊಕೇಟ್ ಜನರಲ್ ಅವರನ್ನು ಕಚೇರಿಗೆ ಕರೆಸಿ ಚರ್ಚೆ ನಡೆಸಿದ್ದೇನೆ, ಇದೊಂದು ವಿಚಿತ್ರ ಸನ್ನಿವೇಶ, ಪ್ರತಿವಾದಿಗಳಾಗಿ ಶಾಸಕಾಂಗ ಪಕ್ಷದ ನಾಯಕರು ಇರಲಿಲ್ಲ ಎಂದು ಸ್ಪೀಕರ್ ಹೇಳಿದರು. ಸದನದಲ್ಲಿ ಭಾವಹಿಸುವಂತೆ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗಿದೆ. ಇದನ್ನು ಸಂವಿಧಾನದ ಶೆಡ್ಯೂಲ್ 10ರಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಜವಾಬ್ದಾರಿಯನ್ನು ಮೊಟಕುಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಶಾಸಕರಿಗೂ ವಿಪ್ ಜಾರಿಗೊಳಿಸಬಹುದು ಎಂದು ಪರೋಕ್ಷವಾಗಿ ಹೇಳಿದರು. ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಅವರು ಸದನದಲ್ಲಿ ಭಾಗವಹಿಸಬಹುದು, ಅಥವಾ ಭಾಗವಹಿಸದಿರಬಹುದು, ಅವರ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನನ್ನ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ. ನನ್ನ ಯಾವುದೇ ಹಕ್ಕನ್ನು ಸುಪ್ರೀಂಕೋರ್ಟ ಉಲ್ಲಂಘಿಸಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು. ವಿಪ್ ಕೊಡುವುದು, ಬಿಡುವುದು ಶಾಸಕಾಂಗ ಪಕ್ಷದ ನಾಯಕರ ವಿವೇಚನೆಗೆ ಬಿಟ್ಟು ವಿಚಾರ, ಅದನ್ನು ಉಲ್ಲಂಘಿಸುವುದು ಬಿಡುವುದು ಅತೃಪ್ತ ಶಾಸಕರಿಗೆ ಬಿಟ್ಟ ವಿಚಾರ. ಆದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ಬಂದರೆ ಅದನ್ನು ನಾನು ಕಾನೂನು ಪ್ರಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇನೆ, ನಾನು ವಿವೇಚನೆ ಬಳಸುವುದಿಲ್ಲ, ಕಾನೂನು ಪ್ರಕಾರ ಮುನ್ನಡೆಯುತ್ತೇನೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.