ಪೊಲೀಸರು ಸಾರ್ವಜನಿಕರ ಅಹವಾಲುಗಳಿಗೆ ತಾಳ್ಮೆಯಿಂದ ವಿಚಾರಿಸಿ ಸ್ಪಂದಿಸಲಿ-ನಿವೃತ್ತ ಪೊಲೀಸ ಸಬ್ ಇನ್ಸಪೆಕ್ಟರ್ ಎಂ.ಐ.ಪಠಾಣ

 ಪೊಲೀಸರು ಸಾರ್ವಜನಿಕರ ಅಹವಾಲುಗಳಿಗೆ ತಾಳ್ಮೆಯಿಂದ ವಿಚಾರಿಸಿ ಸ್ಪಂದಿಸಲಿ-ನಿವೃತ್ತ ಪೊಲೀಸ ಸಬ್ ಇನ್ಸಪೆಕ್ಟರ್ ಎಂ.ಐ.ಪಠಾಣ The police should patiently investigate and respond to the complaints of the public - Retired Police

ಲೋಕದರ್ಶನ ವರದಿ 

  ಹುಬ್ಬಳ್ಳಿ   02: ಪೊಲೀಸರು ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಪೊಲೀಸರು ಕಾನೂನು ಪಾಲನೆ, ಸಾರ್ವಜನಿಕ ಆಸ್ತಿ ಪಾಸ್ತಿಗಳ ಸಂರಕ್ಷಣೆ ಜೊತೆಗೆ ಜನ ಜೀವನದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಅತೀ ಅವಶ್ಯಕವಾಗಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ತೆಗೆದುಕೊಂಡು ಪೊಲೀಸ ಕಚೇರಿಗೆ ಬಂದಾಗ ಅವರ ಸಮಸ್ಯೆಗಳಿಗೆ ತಾಳ್ಮೆಯಿಂದ ವಿಚಾರಿಸಿ ಸ್ಪಂದಿಸಬೇಕು ಎಂದು ನಿವೃತ್ತ ಪೊಲೀಸ ಸಬ್ ಇನ್ಸಪೆಕ್ಟರ್ ಎಂ.ಐ.ಪಠಾಣ ಹೇಳಿದರು.  

ಇಂದು ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತಾಲಯದಿಂದ ಆಯೋಜಿಸಿದ್ದ ಪೊಲೀಸ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಕರ್ನಾಟಕದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 2 ರಂದು ಆಚರಿಸಲಾಗುವುದು. 1965 ಏಪ್ರೀಲ್ 2 ರಂದು ಕರ್ನಾಟಕ ಪೊಲೀಸ್ ಪಡೆ ರಚನೆಯಾದ ನೆನಪಿಗಾಗಿ ಮತ್ತು ಪೊಲೀಸರ ಸೇವೆ, ಶೌರ್ಯ ಹಾಗೂ ತ್ಯಾಗವನ್ನು ಗೌರವಿಸುವ ನಿಟ್ಟಿನಲ್ಲಿ ಪೊಲೀಸ್ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತದೆ.

ರಾಜ್ಯದ ಎಲ್ಲಾ ಘಟಕಗಳಲ್ಲಿ ಪೊಲೀಸ ಧ್ವಜ ದಿನವನ್ನು ಆಚರಿಸಲಾಗುವುದು. ಪೊಲೀಸ ಧ್ವಜ ಮಾರಾಟದಿಂದ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ​‍್ಿಸಲಾಗುತ್ತದೆ. ಈ ಹಣವನ್ನು ನಿವೃತ್ತ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟುಂಬದವರ  ವೈದ್ಯಕೀಯ ವೆಚ್ಚಕ್ಕಾಗಿ ಬಳಕೆ ಮಾಡುವ ಉದ್ದೇಶವನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು.  ಇಂದಿನ ದಿನಗಳಲ್ಲಿ ಪೊಲೀಸ್ ವ್ಯವಸ್ಥೆಯಲ್ಲಿ ನೇಮಕಾತಿ ಹೊಂದಿರುವವರು ವಿದ್ಯಾವಂತರಾಗಿದ್ದು, ಸಾಕಷ್ಟು ಕಾನೂನು ಪಾಲನೆ ವಿಷಯಗಳನ್ನು ಅರಿತಿರುತ್ತಾರೆ. ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದರು.  

ಉದ್ಯಮಿ ವಿ.ಎಸ್‌.ವಿ.ಪ್ರಸಾದ ಮಾತನಾಡಿ, ನಾನು ಸತತವಾಗಿ 23 ವರ್ಷಗಳಿಂದ ಪೊಲೀಸ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಪ್ರತಿ ವರ್ಷ ಪೊಲೀಸ ಕವಾಯತು ನೋಡಿದರೆ ಬಹಳ ಹೆಮ್ಮೆ ಎನಿಸುತ್ತದೆ. ಹುಬ್ಬಳ್ಳಿ ಧಾರವಾಡ ಪೊಲೀಸರು ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹೀಗಾಗಿ ಪೊಲೀಸರು ಯಾವಾಗಲೂ ದೈಹಿಕವಾಗಿ ಸದೃಢರಾಗಿರುತ್ತಾರೆ. ಸಮಾಜಕ್ಕಾಗಿ ಇಡೀ ಜೀವಮಾನವನ್ನೇ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ನಾವು ಚಿರ ಋಣಿಯಾಗಿರಬೇಕು. ಪೊಲೀಸರು ಹಗಲಿರುಳು, ಮಳೆ, ಚಳಿ ಎನ್ನದೇ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಹನುಮ ಜಯಂತಿಯಂದು ಸಹ ಅಚ್ಚುಕಟ್ಟಾಗಿ ಪೊಲೀಸ ಧ್ವಜ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ ಸಾರ್ವಜನಿಕರು ತಮ್ಮ ಕೈಲಾದ ಸಹಾಯವನ್ನು ಮಾಡಬೇಕು ಎಂದು ಅವರು ತಿಳಿಸಿದರು.  

ನಿವೃತ್ತ ಪೊಲೀಸ ಅಧಿಕಾರಿ  ರವಿಕುಮಾರ ನಾಯ್ಕ ಮಾತನಾಡಿ, ಪೊಲೀಸ ಧ್ವಜ ದಿನಾಚರಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರು ಭಾಗವಹಿಸಿ, ಸಹಾಯವನ್ನು ಮಾಡಬೇಕು ಎಂದರು.  ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತರಾದ ಎನ್‌. ಶಶಿಕುಮಾರ ಸ್ವಾಗತಿಸಿ, ವರದಿ ವಾಚಿಸಿ ಮಾತನಾಡಿದ ಅವರು, ಪೊಲೀಸ ಇಲಾಖೆಯು ಸಾರ್ವಜನಿಕರ ಹಿತವನ್ನು ಕಾಪಾಡುವ ಇಲಾಖೆಯಾಗಿದೆ. ಎಲ್ಲರೂ ಹಬ್ಬವನ್ನು ಮಾಡುವ ಸಂದರ್ಭದಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಯಾವುದೇ ಸಂಕಷ್ಟ ಬಂದರೂ ಸಹ ಪೊಲೀಸ ಇಲಾಖೆ ತಕ್ಷಣ ಸ್ಪಂದಿಸುತ್ತದೆ. ಪೊಲೀಸರು ಪ್ರಾಮಾಣಿಕವಾಗಿ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಪೊಲೀಸರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.   

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಪೊಲೀಸ ಧ್ವಜಗಳನ್ನು ಬಿಡುಗಡೆ ಮಾಡಿ ವಿತರಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಉದ್ಯಮಿ ವಿ.ಎಸ್‌.ವಿ. ಪ್ರಸಾದ್ ಅವರು ರೂ. 1,11,600 , ಶಾಂತರಾಜ ಪೋಳ ಅವರು ರೂ.1 ಲಕ್ಷ, ನಿವೃತ್ತ ಡಿವೈಎಸ್‌ಪಿ ವೀರೇಶ ಬೆಳವಡಿ ಅವರು ರೂ.50 ಸಾವಿರ ಹಾಗೂ ವಿಠ್ಠಲ ಲದ್ವಾ ಅವರು ರೂ.50 ಸಾವಿರ ಮೊತ್ತದ ಚೆಕ್ ನೀಡಿದರು.  

ಪರೇಡ್ ಕಮಾಂಡರ್ ಆರ್‌ಎಸ್‌ಐ ಸಂತೋಷ ಭೋಜಪ್ಪಗೋಳ ಅವರ ನೇತೃತ್ವದಲ್ಲಿ ಪೊಲೀಸ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.  ಕಾರ್ಯಕ್ರಮದಲ್ಲಿ ಡಿಸಿಪಿ ರವೀಶ ಸಿ.ಆರ್‌., ಎಸಿಪಿ ಶಿವಾನಂದ ಚಲವಾದಿ, ಉಮೇಶ ಚಿಕ್ಕಮಠ, ಪ್ರಶಾಂತ ಸಿದ್ಧನಗೌಡರ, ನಿವೃತ್ತ ಪೊಲೀಸ ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.  ಪೊಲೀಸ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ಶೃತಿ ಎನ್‌.ಎಸ್ ಅವರು ವಂದಿಸಿದರು.