ತಿದ್ದುಪಡಿ ಮಸೂದೆ ಅಂಗೀಕಾರದಿಂದ ಅಸ್ಸಾಂ ಜನತೆ ಆತಂಕ ಪಡಬೇಕಿಲ್ಲ-ಪ್ರಧಾನಿ

ನವದೆಹಲಿ,12 ಪೌರತ್ವ ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕರಿಸಿದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ನಡುವೆಯೇ ಪ್ರಧಾನಿ ನರೇಂದ್ರಮೋದಿ ಹೇಳಿಕೆ ನೀಡಿ ಮಸೂದೆ ಅಂಗೀಕಾರದಿಂದ ಅಸ್ಸಾಂ ಜನತೆ ಯಾವುದೇ ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ.  ‘ಅಸ್ಸಾಂ ಜನರ ಸಾಂಸ್ಕøತಿಕ, ರಾಜಕೀಯ, ಭಾಷೆ ಮತ್ತು ಭೂ ಹಕ್ಕುಗಳನ್ನು ಸಾಂವಿಧಾನಿಕವಾಗಿ ಸಂರಕ್ಷಿಸಲು ಕೇಂದ್ರ ಸರ್ಕಾರ ಮತ್ತು ತಾವು ಸಂಪೂರ್ಣ ಬದ್ಧರಾಗಿದ್ದೇವೆ. ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರದಿಂದ ಯಾವುದೇ ಆತಂಕ ಪಡಬೇಕಿಲ್ಲ ಎಂಬ ಭರವಸೆಯನ್ನು ಅಸ್ಸಾಂನ ಸಹೋದರರು ಹಾಗೂ ಸಹೋದರಿಯರಿಗೆ ನೀಡುತ್ತಿದ್ದೇನೆ.’ ಎಂದು ಪ್ರಧಾನಿ ನರೇಂದ್ರಮೋದಿ ಸರಣಿ ಟ್ವೀಟ್‍ಗಳಲ್ಲಿ ಹೇಳಿದ್ದಾರೆ. ‘ನಿಮ್ಮ ಹಕ್ಕುಗಳು, ವಿಶಿಷ್ಟ ಅಸ್ತಿತ್ವ ಮತ್ತು ಸುಂದರ ಸಂಸ್ಕøತಿಯನ್ನು ಯಾರೊಬ್ಬರೂ ಕಸಿಯಲಾಗುವುದಿಲ್ಲ ಎಂಬ ಭರವಸೆಯನ್ನು ನೀಡುತ್ತಿದ್ದೇನೆ. ಅಸ್ಸಾಂ ಮತ್ತಷ್ಟು ಪ್ರಗತಿ ಸಾಧಿಸಿ ಪ್ರಜ್ವಲಿಸಬೇಕು.’ ಎಂದು ಪ್ರಧಾನಿ ಹೇಳಿದ್ದಾರೆ. ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗಳ ನಡುವೆ ಪೌರತ್ವ ತಿದ್ದುಪಡಿ ಮಸೂದೆಯನ್ನು  ರಾಜ್ಯಸಭೆ ಬುಧವಾರ ಅಂಗೀಕರಿಸಿತ್ತು.  ರಾಜ್ಯಸಭೆ ಅಂಗೀಕಾರದೊಂದಿಗೆ ಮಸೂದೆಗೆ ಸಂಸತ್‍ನ ಅಂಕಿತ ದೊರೆತಿದೆ.