ಉಡುಪಿ, ಜ 18, ಅದಮಾರು ಮಠದ ಪವಿತ್ರ ‘ಪರ್ಯಾಯ ಸರ್ವಜ್ಞ ಪೀಠ’ಕ್ಕೆ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪೀಠಾರೋಹಣ ಕಾರ್ಯಕ್ರಮ ಶನಿವಾರ ಆರಂಭವಾಗಿದೆ. ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಮಧ್ಯಾಹ್ನ 1.20ಕ್ಕೆ ಉಡುಪಿಯಿಂದ 10 ಕಿ.ಮೀ ದೂರದಲ್ಲಿನ ಕಾಪು ಬಳಿಯ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಆ ನಂತರ ಜೋಡು ಕಟ್ಟೆಗೆ ಆಗಮಿಸಲಿರುವ ಸ್ವಾಮೀಜಿ ಅವರನ್ನು ಅಪಾರ ಸಂಖ್ಯೆಯ ಭಕ್ತರು ಸ್ವಾಗತಿಸಲಿದ್ದಾರೆ. ಮಧ್ಯಾಹ್ನ 1.50ಕ್ಕೆ ಜೋಡುಕಟ್ಟೆಯಿಂದ ಆರಂಭವಾಗುವ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಲಿವೆ. ಅಷ್ಠ ಮಠದ ಸ್ವಾಮೀಜಿಗಳು ಪಾಲ್ಗೊಳ್ಳುವ ಮೆರವಣಿಗೆ ನೇತೃತ್ವವನ್ನು ವಿದ್ಯಾಧೀಶ ತೀರ್ಥ ಸ್ವಾಮೀಜಿ ವಹಿಸಲಿದ್ದಾರೆ. ಪೇಜಾವರ ಮಠದ ಕಿರಿಯ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಸೋದೆ ಮಠದ ವಿಶ್ವವಲ್ಲಭ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯು ತಾಲ್ಲೂಕು ಕಚೇರಿ ರಸ್ತೆ, ಕೋರ್ಟ್ ರಸ್ತೆ, ಡಯಾನ ವೃತ್ತ, ತೆಂಕಪೇಟೆ ಮಾರ್ಗವಾಗಿ ಸಾಗಿ ರಥ ಬೀದಿಯಲ್ಲಿ ಕೊನೆಗೊಳ್ಳಲಿದೆ. ಈ ಮಧ್ಯೆ, ನಿರ್ಗಮಿತ ಪರ್ಯಾಯ ಸ್ವಾಮೀಜಿ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಗೆ ಸಾರ್ವಜನಿಕ ಸನ್ಮಾನ ಆಯೋಜಿಸಲಾಗಿತ್ತು. ಎಂ.ಬಿ.ಪುರಾಣಿಕರು ಸಭಿಕರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನು ಸನ್ಮಾನಿಸಿದರು.