ಕುವೆಂಪು ಸಾಹಿತ್ಯಕ್ಕೆ ಮೂಲ ಪ್ರೇರಣೆ ಪ್ರಕೃತಿ: ಬಾಬುರಾವ ನಡೋಣಿ

The original inspiration for Kuvempu literature is Nature: Baburava Nadoni

ಕಾಗವಾಡ 30: ಕನ್ನಡ ನವೋದಯ ಸಾಹಿತ್ಯದಲ್ಲಿ ಕುವೆಂಪು ಎಂಬ ಹೆಸರೇ ಒಂದು ಕಂಪನ್ನು ಸೂಚಿಸುತ್ತದೆ. ಕುವೆಂಪು ಅವರ ಸಾಹಿತ್ಯಕ್ಕೆ ಮೂಲ ಪ್ರೇರಣೆ ಪ್ರಕೃತಿ ಸೌಂದರ್ಯ. ಅವರ ಬರಹಗಳಲ್ಲಿ ಪ್ರಕೃತಿ ವರ್ಣನೆ ಪರಮಾವಧಿಯನ್ನು ತಲುಪಿದೆಂದು ಬಾಬುರಾವ ನಡೋಣಿ ಹೇಳಿದರು. 

ಅವರು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ) ಕುಪ್ಪಳಿ ಮತ್ತು ಶಿವಾನಂದ ಮಹಾವಿದ್ಯಾಲಯ, ಕಾಗವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಇತ್ತಿಚಿಗೆ ಜರುಗಿದ ಕುವೆಂಪು ಸಾಹಿತ್ಯಾಧ್ಯಯನ ವಿದ್ಯಾರ್ಥಿ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕುವೆಂಪು ಅವರ ಕಾವ್ಯ ಮತ್ತು ಕಥೆ ಕಾದಂಬರಿಗಳನ್ನು ಕೇವಲ ಪ್ರಕೃತಿ ನೆಲೆಯಲ್ಲಿ ಅಧ್ಯಯನಿಸದೆ ವೈಚಾರಿಕ ಹಿನ್ನಲೆಯಲ್ಲಿಯೂ ಅಧ್ಯಯನಿಸಬೇಕಾದ ಅವಶ್ಯಕತೆ ಇದೆ. ಕುವೆಂಪು ಅವರ ಸಾಹಿತ್ಯ ವಿಶ್ವಮಾನವ ಪ್ರೇಮವನ್ನು ಉನಬಡಿಸುವ ಮಹತ್ತರವಾದ ಕಾರ್ಯವನ್ನು ಮಾಡಿದೆ. ಸರ್ವೋದಯ ಸಮನ್ವಯತೆ ಇವು ಕುವೆಂಪು ಅವರು ಕೊಟ್ಟ ಮಹತ್ವದ ಅಂಶಗಳಾಗಿವೆ. ಕುವೆಂಪು ಅವರನ್ನು ಒಂದೇ ಜಾತಿಗೆ ಸೀಮಿತವನ್ನಾಗಿಸದೇ ವಿಶ್ವಮಾನವರನ್ನಾಗಿಸಬೇಕಾದ ತುರ್ತು ಈ ದಿನಮಾನದಲ್ಲಿದೆ ಎಂದರು. 

ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ ಪ್ರಕಾಶ ಮತ್ತು ಕಮ್ಮಟದ ಸಂಯೋಜ ಡಾ.ಗುರುಪಾದ ಮರಿಗುದ್ದಿ ಮಾತನಾಡಿದರು.  

ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಎಸ್‌.ಎ. ಕರ್ಕಿ ವಹಿಸಿದ್ದರು. ಕುವೆಂಪು ಸಾಹಿತ್ಯ ಕುರಿತು ಎರಡು ಪ್ರಮುಖ ಗೋಷ್ಠಿಗಳು ನಡೆದವು. 

ಕುವೆಂಪು ಮತ್ತು ವರ್ತಮಾನದ ಕುರಿತು ವೀರಣ್ಣ ಮಡಿವಾಳರ, ಕುವೆಂಪು ನಿಸರ್ಗ ಕುರಿತು ಡಾ.ಬಸವರಾಜ ಕಲ್ಗುಡಿ, ಕುವೆಂಪು ಸಾಹಿತ್ಯದಲ್ಲಿ ಸೃಷ್ಟಿತತ್ವ ಕುರಿತು ಡಾ.ವಿ ಎಸ್ ಮಾಳಿ, ಕುವೆಂಪು ಕಾವ್ಯದಲ್ಲಿ ಗ್ರಾಮ ಚಿಂತನೆ ಕುರಿತು ಡಾ.ರಾಜಶೇಖರ ಹಳೇಮನಿ ತಮ್ಮ ವಿದ್ವತ್ ಪ್ರಬಂಧಗಳನ್ನು ಮಂಡಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ಹಿರಿಯ ಬಂಡಾಯ ಸಾಹಿತಿಗಳಾದ ಡಾ.ವೈ.ಬಿ. ಹಿಮ್ಮಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

ಮಹಾವಿದ್ಯಾಲಯದ ಆಡಳಿತಾಧಿಕಾರಿ ಮೇಜರ್ ವ್ಹಿ.ಎಸ್‌. ತುಗಶೆಟ್ಟಿ ಅವರಿಂದ ‘ವಿದ್ಯಾರ್ಥಿಗಳೇ ಏಳಿ ಕುವೆಂಪು ಕರೆ ಕೇಳಿ’ ಎಂಬ  ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.  

ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರೊ. ಜೆ.ಕೆ. ಪಾಟೀಲ ಪ್ರೊ. ಜೆ.ಎನ್‌. ನಾಯಿಕ ಮತ್ತು ಪ್ರೊ. ಎಸ್‌.ಎಸ್‌. ಫಡತರೆ, ಪ್ರೊ. ಎನ್‌.ಎಂ. ಬಾಗೇವಾಡಿ, ಪ್ರೊ.ಎಸ್‌.ಎಂ. ಪರಗೌಡಾ ಕಾರ್ಯಕ್ರಮದ ವಿವಿಧ ಗೋಷ್ಠಿಗಳನ್ನು ನಿರೂಪಿಸಿದರು. ಅಥಣಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ ಲೋಕಾಪುರ, ಚಂದ್ರಶೇಖರ ಪಾಟೀಲ, ಸಾಗರ ಝೆಂಡೆನ್ನವರ ಸೇರಿದಂತೆ ಮಹಾ ವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಕಮ್ಮಟದಲ್ಲಿ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ.ವ್ಹಿ.ಬಿ. ಬುರ್ಲೆ ಹಾಗೂ ಪ್ರೊ.ಎಸ್‌.ಎಸ್‌. ಮೋರೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಪೂಜಾ ಮಂಡಾಗಣೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಎಂ. ಜಕ್ಕಣ್ಣವರ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಬಿ.ಡಿ. ಧಾಮಣ್ಣವರ ವಂದಿಸಿದರು.