ಮುಂಬೈ-ಪುಣೆಯಿಂದ ಬಂದವರಿಗೆ ಪ್ರತ್ಯೇಕ ಕ್ವಾರಂಟೈನ್ ಮೂಲಕ ನಿಗಾ ಇಡಿ

ವಿಜಯಪುರ ಮೇ. 21: ಅಂತರ್ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಮುಂಬೈ ಮತ್ತು ಪುಣೆದಿಂದ ಬಂದವರಿಗೆ ಆದ್ಯತೆ ಮೇಲೆ ಪ್ರತ್ಯೇಕವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡುವಂತೆ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು .

ಜಿಲ್ಲೆಯ ಎಲ್ಲಾ ತಾಲೂಕಾ ತಹಶಿಲ್ದಾರ, ಟಿ.ಎಚ್.ಒ ಹಾಗೂ ಬಿ.ಇ.ಓಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಹೊರ ರಾಜ್ಯಗಳಿಂದ ಆಗಮಿಸಿದ ಜನರನ್ನು ಸಾಂಸ್ಥಕ ಕ್ವಾರಂಟೈನ್ ಮಾಡುವುದರ ಜೊತೆಗೆ ಯಾರೊಬ್ಬರು ಕ್ವಾರಂಟೈನ್ದಿಂದ ಹೊರಹೋಗದಂತೆ ಎಚ್ಚರಿಕೆ ವಹಿಸಬೇಕು. ಅದರಂತೆ ಕ್ವಾರಂಟೈನ್ದಿಂದ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಗಂಟಲುದ್ರವ ಮಾದರಿ 15ನೇ ದಿನಕ್ಕೆ ಪಡೆದು ಬಿಡುಗಡೆ ಮಾಡುವಂತೆ ಅವರು ಸೂಚಿಸಿದರು.

ಅದರಂತೆ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ನಂತರ ಹೋಮ್ಕ್ವಾರಂಟೈನ್ದಲ್ಲಿ ನಿಗಾ ಇಡಬೇಕು. ತಪ್ಪದೆ ಪ್ರತಿಯೊಬ್ಬರು ಆರೋಗ್ಯ ಸೇತು ಆಪ್ ಬಳಸುವಂತೆ ನೋಡಿಕೊಳ್ಳಬೇಕು.  ಕ್ವಾರಂಟೈನ್ ವಾಚ್ ಆಪ್ ಮೂಲಕವು ತೀವ್ರ ನಿಗಾ ಇಡುವಂತೆ ಸೂಚಿಸಿದ ಅವರು ತಹಶಿಲ್ದಾರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಬಿ.ಇ.ಒ, ಟಿ.ಎಚ್.ಒ ಗಳು ಸಮನ್ವಯತೆಯಿಂದ ಮೇಲ್ವಿಚಾರಣೆ ನಡೆಸಬೇಕು. ಪಿ.ಡಿ.ಒ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಇತರೇ ಸಿಬ್ಬಂದಿಗಳು ತಮ್ಮ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುವಂತೆ ನೋಡಿಕೊಳ್ಳಲು ಸೂಚಿಸಿದರು.

ತಾಲೂಕಾವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದ ಆವರು ಮಾಹಿತಿ ನೀಡದೆ ವಿಡಿಯೋ ಸಂವಾದಕ್ಕೆ ಗೈರು ಹಾಜರಾದ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ತಿಳಿಸಿ ಸಾರಿ ಮತ್ತು ಐ.ಎಲ್.ಐ ಲಕ್ಷಣವುಳ್ಳವರನ್ನು ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿಯವರು ಶಿಷ್ಠಾಚಾರದಂತೆ ಗಂಟಲು ದ್ರವ ಮಾದರಿ ಸಂಗ್ರಹ, ಬಿಡುಗಡೆ, ಕ್ವಾರಂಟೈನ್ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ತಹಶಿಲ್ದಾರ, ಇ.ಒ ಮತ್ತು ಟಿ.ಎಚ್.ಒಗಳು ಉಪ ಸಮಿತಿಗಳನ್ನು ರಚಿಸಿಕೊಂಡು ಬಿಡುಗಡೆ ನಿಯಮ ಪಾಲಿಸಬೇಕು. ಮುಂಬೈ ಪುಣೆ ಜನರ ಬಗ್ಗೆ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. 

          ಪ್ರತಿದಿನ ಪ್ರತಿ ತಾಲೂಕಿನಲ್ಲಿ ತಲಾ 300 ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಕ್ರಮಕೈಗೊಳ್ಳಬೇಕು. ಪಿ.ಡಿ.ಓ, ಗ್ರಾಮ ಲೆಕ್ಕಾಧಿಕಾರಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿರುವ ಟಾಸ್ಕ್ ಫೋಸರ್್ ಸಮಿತಿಗಳ ಮೂಲಕ ಹೋಮ್ ಕ್ವಾರಂಟೈನ್ ಕ್ರಮ, ಮನೆಗಳಿಗೆ ನೋಟಿಸ್ ಅಂಟಿಸುವುದು, ಸೀಲ್ ಹಾಕಿಸುವುದು ಸೇರಿದಂತೆ ಇನ್ನಿತರ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ,ಔದ್ರಾಮ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.