ಮುಂದಿನ ಸಚಿವ ಸಂಪುಟ ವಿಸ್ತರಣೆ ಮರೀಚಿಕೆ : ಸತೀಶ್ ಜಾರಕಿಹೊಳಿ

 ಬೆಳಗಾವಿ, ಸೆ 8        ಮುಂದಿನ ಸಚಿವ ಸಂಪುಟ ವಿಸ್ತರಣೆ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.     ಬೆಳಗಾವಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯ ಕೇಂದ್ರ ನಾಯಕರು ಬಿಜೆಪಿಯ ಶಾಸಕರಿಗೂ ಸಚಿವ ಸ್ಥಾನ ಕೊಡುತ್ತಿಲ್ಲ, ಇನ್ನೊಂದು ಕಡೆ ಅನರ್ಹ ಶಾಸಕರಿಗೂ ತಕ್ಷಣವೇ ಮಂತ್ರಿ ಭಾಗ್ಯ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ, ಹೀಗಾಗಿ ಮುಂದಿನ ಸಚಿವ ಸಂಪುಟ ವಿಸ್ತರಣೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ ಎಂದರು.     ಪರಿಸ್ಥಿತಿ ಹೀಗಿರುವಾಗ ಹಗಲು ಕಂಡ ಬಾವಿಗೆ ರಾತ್ರಿ ಹೋಗಿ ಯಾರೂ ಬೀಳುವುದಿಲ್ಲ, ಬಿಜೆಪಿ ನಾಯಕರ ಮನಸ್ಸಿನಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇನ್ನು ಮುಂದೆ ಯಾವುದೇ ಜೆಡಿಎಸ್ ಶಾಸಕರಾಗಲೀ, ಕಾಂಗ್ರೆಸ್ ಶಾಸಕರಾಗಲೀ ಬಿಜೆಪಿ ಕಡೆ ಹೋಗುವುದಿಲ್ಲ ಎಂದು ಅವರು ಹೇಳಿದರು.     ಈಗಾಗಲೇ ಬಿಜೆಪಿ ಕಡೆ ಹೋಗಲು ಮಾನಸಿಕ ಸಿದ್ಧರಾಗಿರುವ ಶಾಸಕರಿಗೂ, ಅನರ್ಹ ಶಾಸಕರಿಗೂ ಮುಂದಿನ ಭವಿಷ್ಯದ ಚಿಂತೆ ಬಹಳವಾಗಿ ಕಾಡುತ್ತಿದೆ. ಹೀಗಾಗಿ ಸರ್ಕಾರದ ಭವಿಷ್ಯದ ಮೇಲೆ ಒಂದು ರೀತಿ ಆತಂಕದ ಕಾರ್ಮೊಡ ಕವಿದಿದೆ ಎಂದು ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.    ಜಾರಕಿಹೊಳಿ ಸಹೋದರರ ನಡುವಿನ ಕಲಹಕ್ಕೆ  ತಾವು ಕಿಚ್ಚು ಹಚ್ಚಿಲ್ಲ ಎಂದ ಅವರು, ತಾವು ಒಳಿತಿಗಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.    ಕೇವಲ ದೇವಾಲಯಗಳಿಗೆ ಭೇಟಿ ನೀಡದರೆ ಸಾಲದು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.