ನವದೆಹಲಿ, ನ.4: ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯಕ್ಕೆ ವಾಯುಮಾಲಿನ್ಯ ಕಾಟ ನೀಡಿದ್ದು, ಪಂದ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೇರೆ ಸ್ಥಳಕ್ಕೆ ವರ್ಗಾಯಿಸದೇ ಇರುವುದು ಬೇಸರ ತಂದಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ನಜ್ಮುಲಾ ಹಸನ್ ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈ ಮೊದಲೇ ತಿಳಿಸಿದಂತೆ ಬದಲಾವಣೆಯ ಮನವಿ ತಡವಾಯಿತು ಎಂದು ತಿಳಿಸಿದ್ದರು. ಬಾಂಗ್ಲಾದೇಶದ ಆಟಗಾರರು ಅಭ್ಯಾಸದ ವೇಳೆ ಮಾಸ್ಕ್ ಧರಿಸಿದ್ದರು. ನಿಜ ಹೇಳಬೇಕಂದರೆ ಈ ಬಗ್ಗೆ ನಮಗೆ ತಿಳಿದಿರಲಿಲ್ಲ. ಇಲ್ಲಿನ ಪರಿಸ್ಥಿತಿ ಕೊನೆಯ ಕ್ಷಣದಲ್ಲಿ ಅರಿವಾಯಿತು. ಅಲ್ಲದೆ ದೆಹಲಿಯಲ್ಲಿನ ವಾತಾವರಣದ ಬಗ್ಗೆ ಅಂತರ್ಜಾಲದಲ್ಲಿ ನೋಡಿ ಗಾಭರಿ ಪಟ್ಟೆ ಎಂದು ನಜ್ಮುಲಾ ಹಸನ್ ಹೇಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಳಿದಾಗ ಮಂಜು ಮುಸುಕಿದ ವಾತಾವರಣ ಕಾಣಿಸಿಕೊಂಡಿತು. ಆದರೆ ಇದು ಮಂಜಲ್ಲ ಎಂಬುದು ತಡವಾಗಿ ತಿಳಿಯಿತು. ಹೀಗಿರುವಾಗ ಹೇಗೆ ಆಡುವುದು ಎಂದು ಪ್ರಶ್ನಿಸಿದ್ದೆ. ಈ ವಿಚಾರವಾಗಿ ಆಟಗಾರರು ಹಾಗೂ ತರಬೇತು ದಾರರೊಂದಿಗೆ ಸಂಪರ್ಕದಲ್ಲಿದ್ದೆ ಎಂದಿದ್ದಾರೆ.