ಅಹಿಂಸೆ ಮತ್ತು ಶಾಂತಿ ಮಂತ್ರ ಸರ್ವಕಾಲಕ್ಕೂ ಪ್ರಸ್ತುತ: ಮುಂಡಗೋಡಿನಲ್ಲಿ ಮಹಾವೀರ ಜಯಂತಿ ಆಚರಣೆ

ಅಹಿಂಸೆ ಮತ್ತು ಶಾಂತಿ ಮಂತ್ರ ಸರ್ವಕಾಲಕ್ಕೂ ಪ್ರಸ್ತುತ: ಮುಂಡಗೋಡಿನಲ್ಲಿ ಮಹಾವೀರ ಜಯಂತಿ ಆಚರಣೆ  The mantra of non-violence and peace is ever-present: Mahavir Jayanti celebrated in Mundgod

ಲೋಕದರ್ಶನ ವರದಿ

ಮುಂಡಗೋಡ 31:  ಭಗವಾನ್ ಮಹಾವೀರರು ಬೋಧಿಸಿದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಪಂಚಶೀಲ ತತ್ವಗಳು ಕೇವಲ ಒಂದು ಕಾಲಕ್ಕೆ ಸೀಮಿತವಲ್ಲ, ಅವು ಸರ್ವಕಾಲಕ್ಕೂ ಅನ್ವಯವಾಗುವ ಜೀವನ ಸೂತ್ರಗಳಾಗಿವೆ ಎಂದು ತಹಶೀಲ್ದಾರ್ ಶಂಕರ ಗೌಡಿ ಅಭಿಪ್ರಾಯಪಟ್ಟರು. ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಜೈನ ಸಮುದಾಯದ ಆಶ್ರಯದಲ್ಲಿ ಸೋಮವಾರ ಶಿರಸಿ ರಸ್ತೆಯ ಜೈನ ಬಸದಿಯ ಆವರಣದಲ್ಲಿ ಆಯೋಜಿಸಲಾಗಿದ್ದ ’ಭಗವಾನ್ ಮಹಾವೀರ ಜಯಂತ್ಯುತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಶಾಲೆಗಳಲ್ಲಿ ’ಹೊಸ ಮತಗಳ ಉದಯ’ ಪಾಠದ ಮೂಲಕ ಬುದ್ಧ ಮತ್ತು ಮಹಾವೀರರ ತತ್ವಗಳನ್ನು ನಾವು ಬಾಲ್ಯದಿಂದಲೇ ಅರಿತಿದ್ದೇವೆ ಎಂದ ಅವರು, ವಾಸ್ತುಶಿಲ್ಪಕ್ಕೆ ಜೈನ ಅರಸರು ನೀಡಿದ ಕೊಡುಗೆ ಅಪಾರವಾದುದು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪ ರಾಣಿ ಮಾತನಾಡಿ, "ಮಹಾನ್ ಪುರುಷರ ಜಯಂತಿಗಳನ್ನು ಕೇವಲ ಆಚರಣೆಗಷ್ಟೇ ಸೀಮಿತಗೊಳಿಸದೆ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆಚರಣೆಗೆ ಅರ್ಥ ಬರುತ್ತದೆ. ಮಹಾವೀರರು ಜೈನ ಧರ್ಮದ ಸ್ಥಾಪಕರಲ್ಲ, ಬದಲಿಗೆ 24ನೇ ತೀರ್ಥಂಕರರು.

ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವಾಗ, ಅವರ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಭೌತಿಕ ಸುಖಗಳನ್ನು ತ್ಯಜಿಸಿ, ಪ್ರತಿಯೊಂದು ಜೀವಿಯೂ ಬದುಕುವ ಹಕ್ಕನ್ನು ಗೌರವಿಸುವುದೇ ಧರ್ಮದ ಸಾರ" ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಇಒ ಸುಮಾ ಜಿ. ಮಾತನಾಡಿ, ಕ್ರೌರ್ಯ ಮತ್ತು ಹಿಂಸೆ ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಹಾವೀರರ ತ್ಯಾಗ ಮತ್ತು ಆದರ್ಶಗಳು ಮನುಕುಲಕ್ಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಸಮಾರಂಭದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ. ಪಿ.ಪಿ. ಛಬ್ಬಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಜೈನ ಸಮಾಜದ ತಾಲೂಕು ಅಧ್ಯಕ್ಷ ಧರಣೇಂದ್ರ ಅಂಗಡಿ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಹಾಗೂ ರಮೇಶ ಅಂಬಿಗೇರ ಅವರು ಮಹಾವೀರರ ಜೀವನದ ಕುರಿತು ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಜೈನ ಬಸದಿಯಿಂದ ಶ್ರೀ ಶಂಭವನಾಥ ಮತ್ತು ಮಹಾವೀರರ ಭಾವಚಿತ್ರದ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಶ್ರಾವಕ-ಶ್ರಾವಕಿಯರು ಬರಿಗಾಲಿನಲ್ಲಿ ಸಾಗಿ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರಳಿದರು. ವೇದಿಕೆಯಲ್ಲಿ ಸಿಡಿಪಿಒ ಸಂಜೀವ ಸದಲಗಿ, ಪ.ಪಂ ಮುಖ್ಯಾಧಿಕಾರಿ ಸಂತೋಷ ಕುಮಾರ ಎಚ್‌., ಶಿರಸ್ತೇದಾರರಾದ ಜಿ.ಬಿ. ಭಟ್, ಎಸ್‌.ಡಿ. ಮುಡೆಣ್ಣವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಅರುಣಾ ಕುತ್ತೆ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಡಾ. ಪಿ.ಪಿ. ಛಬ್ಬಿ ಸ್ವಾಗತಿಸಿದರೆ, ಅಶೋಕ ಸಂಕ್ರಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು.