ಗದಗ 28: ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳಿಗೂ ಸಹಾನುಭೂತಿ ಬೇಕು. ಅವುಗಳ ರಕ್ಷಣೆಯೂ ಕೂಡ ಅಷ್ಟೇ ಮಹತ್ವದ್ದಾಗಿದೆ. ಪ್ರಾಣಿ ಹಿಂಸೆ ತಡೆಗಟ್ಟಿ ಅವುಗಳನ್ನು ರಕ್ಷಿಸುವುದು ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದು ಪ್ರಾಣಿ ದಯಾ ಸಂಘದ ಮುಖ್ಯ ಉದ್ದೇಶವಾಗಿದೆ ಎಂದು ನವದೆಹಲಿಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರಾದ ಗೌರಿ ಮಾಲೇಕಿ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಪ್ರಾಣಿ ದಯಾ ಸಂಘದ ಕುರಿತು ಸಭೆಯಲ್ಲಿ ಅವರು ಮಾತನಾಡಿದರು. ಮನುಷ್ಯರು ಪ್ರಾಣಿಗಳನ್ನು ಜೀವನೋಪಾಯುಕ್ಕಾಗಿ, ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದಲ್ಲದೇ ಅವುಗಳಿಗೆ ಹಿಂಸೆ ಕೊಡುತ್ತಿದ್ದೇವೆ. ಪ್ರಾಣಿಗಳ ಕುರಿತು ಸೌಹಾರ್ದತೆ ಭಾವನೆ ಹಾಗೂ ಪರಿಸರ ಸಂರಕ್ಷಿಸಲು ಪ್ರಾಣಿ ಸಂರಕ್ಷಣೆ ಹಾಗೂ ಕಲ್ಯಾಣ ಕಾಯ್ದೆಗಳು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪರಿಣಾಮಕಾರಿ ಅನುಷ್ಟಾನ ಜೊತೆಗೆ ಪ್ರಾಣಿ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅನುಷ್ಟಾನಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘ ರಚಿಸಲಾಗಿದೆ. ಸಾರ್ವಜನಿಕರ ಪಾಲ್ಗೊಳ್ಳೂವಿಕೆ, ಕರ್ತವ್ಯಗಳು ಹಾಗೂ ಜವಾಬ್ದಾರಿಗಳು, ಪ್ರಾಣಿಗಳ ಸಾಗಾಟದ ವೇಳೆ ಪಾಲಿಸಬೇಕಾದ ನಿಯಮಗಳು, ಈ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮ ಹಮ್ಮಿಕೊಳ್ಳುವುದು, ಪ್ರಾಣಿ ಜನನ ಕಸಾಯಿ ಖಾನೆಗಳ ನಿಯಂತ್ರಣದಲ್ಲಿ ಇದರಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಪ್ರಾಣಿ ದೌರ್ಜನ್ಯ ಕಂಡು ಬಂದಲ್ಲಿ ಪೊಲೀಸ ಇಲಾಖೆಯಿಂದ ಎಫ್ ಐ ಆರ್ ದಾಖಲಾತಿ ಮಾಡುವ ಅವಕಾಶ ಇರುವ ಕುರಿತು ಗೌರಿ ಮಾಹಿತಿ ನೀಡಿದರು. ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಹೊರತಂದ ಪ್ರಾಣಿ ಕಲ್ಯಾಣ ಕಾಯ್ದೆಗಳು, ಕಾನೂನು ಮತ್ತು ನಿಯಮಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಾಣಿ ಸಂರಕ್ಷಣೆ ಕುರಿತಂತೆ ಮಾತನಾಡಿ ಇತ್ತೀಚೆಗೆ ನೆರೆ ಹಾವಳಿ, ಪ್ರಾಣಿಗಳನ್ನು ಸಂರಕ್ಷಿಸಲಾಗಿದೆ. ಎಲ್ಲ ಜಾನುವಾರುಗಳಿಗೆ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿದೇಶಕ ಚನ್ನಕೇಶವಯ್ಯ, ಪಾಲಿಕ್ಲಿನಿಕ್ದ ಡಾ. ಪ್ರಕಾಶ ಜಟ್ಟೆಣ್ಣವರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ತಿಪ್ಪಣ್ಣ ತಳಕಲ್ಲ, ಗದಗ ಬೆಟಗೇರಿ ನಗರಸಭೆ ಆಯುಕ್ತ ಮನ್ಸೂರ್ ಅಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕು. ವಿನಯಾ ಕಾಟೋಕರ್, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.