ಕೊನೆಗೂ ಶತಕ ಬಾರಿಸಿದ್ದು ನಿಜಕ್ಕೂ ವಿಶೇಷವೆನಿಸುತ್ತಿದೆ: ರಹಾನೆ

ನಾರ್ಥ ಸೌಂಡ್, ಆ 26     ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ 81 ಮತ್ತು ದ್ವಿತೀಯ ಇನಿಂಗ್ಸ್ 102 ರನ್ ಗಳಿಸಿ ಭಾರತದ ಗೆಲುವಿಗೆ ಮಹತ್ತರ ಪಾತ್ರವಹಿಸಿದ ಉಪ ನಾಯಕ ಅಜಿಂಕ್ಯಾ ರಹಾನೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿ ಕೊನೆಗೂ ಶತಕ ಬಾರಿಸಿದ್ದು ವಿಶೇಷವೆನಿಸಿದೆ ಎಂದು ತಿಳಿಸಿದ್ದಾರೆ. 

ಭಾರತ ನೀಡಿದ್ದ 419 ರನ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಜಸ್ಪ್ರಿತ್ ಬುಮ್ರಾ (7 ಕ್ಕೆ 5) ಅವರ ಮಾರಕ ದಾಳಿಗೆ ನಲುಗಿ 100 ರನ್ಗಳಿಗೆ ಆಲ್ ಔಟ್ ಆಯಿತು. ಭಾರತ ಟೆಸ್ಟ್ ಕ್ರಿಕೆಟ್ನಲ್ಲೇ ನಾಲ್ಕನೇ ಅತಿ ದೊಡ್ಡ ಜಯ ಸಾಧಿಸಿತು.  

ಪಂದ್ಯದ ಬಳಿಕ ಮಾತನಾಡಿದ ಅವರು, ಪಂದ್ಯದ ಗೆಲುವಿಗೆ ನೆರವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು ತುಂಬಾ ವಿಶೇಷವೆನಿಸುತ್ತಿದೆ. ಮೊದಲನೇ ಇನಿಂಗ್ಸ್ ಬಹಳ ನಿರ್ಮಾಯಕವಾಗಿತ್ತು. ಕೆ.ಎಲ್ ರಾಹುಲ್ ಜತೆ ಜತೆಯಾಟ ಅತ್ಯಂತ ಮುಖ್ಯವಾಗಿತ್ತು. ಈ ಸರಣಿಗೂ ಮುನ್ನ ಹ್ಯಾಮ್ಶೈರ್ ಪರ ಕೌಂಟಿ ಆಡಿದ್ದು ತುಂಬಾ ನೆರವಾಗಿದೆ ಎಂದು ರಹಾನೆ ಹೇಳಿದರು.   

"ಕಳೆದ ಒಂದರಿಂದ ಎರಡು ವರ್ಷ ನನ್ನನ್ನು ಬೆಂಬಲಿಸಿದವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಅರ್ಪಿಸಲು ಇಚ್ಚಿಸುತ್ತೇನೆ. ನನಗೆ ಅನಿಸಿದ ಹಾಗೆ ಮೊದಲನೇ ದಿನ ಇಲ್ಲಿನ ಪಿಚ್ ಕಠಿಣವಾಗಿತ್ತು. ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿದರೆ ರನ್ ತಾನಾಗೆ ಬರುತ್ತದೆ ಎಂದು ಅರಿವಾಗಿತ್ತು. ಹಾಗಾಗಿ, ಬ್ಯಾಟಿಂಗ್ ದೀರ್ಘ ಅವಧಿ ಆಡಬೇಕೆಂದು ಯೋಜನೆ ಹಾಕಿಕೊಂಡಿದ್ದೆ" ಎಂದು ಹೇಳಿದರು. 

"ನಿಗದಿತ ಓವರ್ಗಳ ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಜಸ್ಪ್ರಿತ್ ಬುಮ್ರಾ ಅವರು ಅತ್ಯುತ್ತಮವಾಗಿ ಬೌಲಿಂಗ್ ನಿರ್ವಹಣೆ ಮಾಡಿದರು. ಎದುರಾಳಿ ಬ್ಯಾಟಿಂಗ್ ವಿಭಾಗದ ಮೇಲೆ ಒತ್ತಡ ಹೇರುವಲ್ಲಿ ಸಫಲರಾದರು. ನಮ್ಮ ಯೋಜನೆಗೆ ತಕ್ಕಂತೆ ಬೌಲಿಂಗ್ ವಿಭಾಗ ನಡೆದುಕೊಂಡಿತು. ಹೆಚ್ಚು ಕಠಿಣ ಪರಿಶ್ರಮ ಪಟ್ಟಿದ್ದು ಇದೀಗ ಸಕಾರವಾಗಿದೆ" ಎಂದು ಅಜಿಂಕ್ಯಾ ರಹಾನೆ ತಿಳಿಸಿದರು.