ಲೋಕಸಭೆಯಲ್ಲಿ ಬಿಜೆಪಿಯಿಂದ ನಾಪತ್ತೆಯಾದ ಸೈನಿಕನ ವಿಷಯ ಪ್ರಸ್ತಾಪ

ನವದೆಹಲಿ, ಫೆ 4 :       ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದ ಸೈನಿಕನೋರ್ವ ಹಿಮದಲ್ಲಿ ಜಾರಿ ನಾಪತ್ತೆಯಾಗಿರುವ ವಿಷಯವನ್ನು ಲೋಕಸಭೆಯಲ್ಲಿ ಮಂಗಳವಾರ ಬಿಜೆಪಿ ಪ್ರಸ್ತಾಪಿಸಿತು. 

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಅಜಯ್ ಭಟ್, ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಜ 8 ರಂದು ಕಾವಲು ಕಾಯುತ್ತಿದ್ದ ಹವಲ್ದಾರ್ ರಾಜೇಂದ್ರ ಸಿಂಗ್ ನೇಗಿ ಕಾಣೆಯಾಗಿದ್ದಾರೆ. 

ಘಟನೆ ನಡೆದು ಒಂದು ತಿಂಗಳಾದರೂ ಕಾಣೆಯಾದ ಸೈನಿಕನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಸೈನಿಕ ಹಿಮದಲ್ಲಿ ಜಾರಿ ಗಡಿ ದಾಟಿರಬಹುದು ಎಂದು ಹೇಳಲಾಗುತ್ತಿದೆ ಎಂದು ಹೇಳಿದರು. 

ಸರ್ಕಾರ ಮಧ್ಯಪ್ರವೇಶಿಸಿ ಸೈನಿಕನ ಕುರಿತು ಮಾಹಿತಿ ನೀಡಬೇಕು ಎಂದು ಅಜಯ್ ಭಟ್  ಕೋರಿದರು.