ಜಾಗತಿಕ ಆರ್ಥಿಕ ಕುಸಿತದಿಂದ ಕೃಷಿ ಉದ್ಯಮಕ್ಕೆ ಹೊಡೆತ: ಠಾಕೂರ್

ನವದೆಹಲಿ, ಫೆ 10 :    ಜಾಗತಿಕ  ಆರ್ಥಿಕ ಹಿನ್ನೆಡೆಯಿಂದಾಗಿ  ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಸೇವೆಗಳು  ಹೊಡೆತಕ್ಕೆ  ಒಳಗಾಗಿದೆ ಎಂದು ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ.

ಈ ಪರಿಸ್ಥಿತಿಯನ್ನು ಸರ್ಕಾರ ಮನಗಂಡು ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿದೆ ಎಂದು ಲೋಕಸಭೆಯಲ್ಲಿ ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. 

ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿಸುವ 3 ಲಕ್ಷ ಕೋಟಿ ರೂಪಾಯಿಗಳ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯನ್ನೂ ಪ್ರಾರಂಭಿಸಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. 

ಜಾಗತಿಕ ಜಿಡಿಪಿ ಶೇಕಡಾ 2.9 ರಷ್ಟಿದೆ, ಭಾರತದ ಬೆಳವಣಿಗೆಯ ದರವು ಶೇಕಡಾ 5 ರಷ್ಟಿದೆ ಎಂದು ಸಚಿವರು ಸಮಜಾಯಿಷಿ ನೀಡಿದರು.

ಪರಿಸ್ಥಿತಿ ಸುಧಾರಿಸಲು ಸರ್ಕಾರ ಬ್ಯಾಂಕ್ ಮರು ಬಂಡವಾಳೀಕರಣಕ್ಕಾಗಿ 3.5 ಲಕ್ಷ ಕೋಟಿ ರೂಪಾಯಿ ಮತ್ತು ಎನ್‌ಬಿಎಫ್‌ಸಿ ವಲಯದಲ್ಲಿ 1.1 ಲಕ್ಷ ಕೋಟಿ ರೂಪಾಯಿ ಒದಗಿಸಿದ್ದು ಪರಿಣಾಮವಾಗಿ ಬ್ಯಾಂಕುಗಳು ಫಲ ಕೊಡುವೆ ಹಾದಿಯಲ್ಲಿ ಸಾಗಿವೆ ಎಂದು ತಿಳಿಸಿದರು.

ಹಿಂದಿನ ಆಡಳಿತದಲ್ಲಿ ದ್ವಿಗುಣದಲ್ಲಿದ್ದ ಹಣದುಬ್ಬರ ಈಗ 4.1 ಕ್ಕೆ ಇಳಿದಿದೆ ಮತ್ತು ಹಣಕಾಸಿನ ಕೊರತೆಯೂ ಶೇಕಡಾ 3.8 ಕ್ಕೆ ಇಳಿದಿದೆ ಎಂದು ಅವರು ಹೇಳಿದರು.

ಭಾರತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಭಾರತದ ಮೇಲೆ ಇತರ ದೇಶಗಳ ನಂಬಿಕೆ ಹೆಚ್ಚುತ್ತಿದೆ ಇದು ಉತ್ತಮ ಮತ್ತು ಪ್ರಗತಿಯ ಸಂಕೇತ ಎಂದು ಸಚಿವರು ಸ್ಪಷ್ಟಪಡಿಸಿದರು.