ಹಾವೇರಿ27: ಮೌಲ್ಯಯುತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಜ್ಞಾನದ ಬೆಳಕು ನೀಡಿದ ಕಾಯಕ ಶರಣರ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ದೇವರಾಜ ಅರಸು ಭವನದಲ್ಲಿ ಗುರುವಾರ ಜರುಗಿದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಉರಿಲಿಂಗ ಪೆದ್ದಿಯವರ, ಡೋಹರ ಕಕ್ಕಯ್ಯ, ಮಾದಾರ ದೂಳಯ್ಯ, ಸಮಗಾರ ಹರಳಯ್ಯನವರು 12ನೇ ಶತಮಾನದಲ್ಲೆ ವಚನ ಕ್ರಾಂತಿಯನ್ನುಂಟು ಮಾಡಿದರು. ಜನಸಾಮಾನ್ಯರಿಗೂ ಅರ್ಥವಾಗುವಂತ ಸರಳ ಪದಗಳ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸಮಾಡಿದ್ದಾರೆ. ಇಂತಹ ಮಹಾತ್ಮರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಶರಣರ ಜಯಂತಿಗಳು ಅರ್ಥಪೂರ್ಣವಾಗಲು ಸಾಧ್ಯ ಎಂದು ಹೇಳಿದರು.ವಚನಕಾರರು ಸಮಾಜದಲ್ಲಿಯ ಅಸ್ಪೃಶ್ಯತೆ, ಅಸಮಾನತೆ, ಮೂಢನಂಬಿಕೆ, ತಾರತಮ್ಯದ ಮನೋಭಾವನೆಯನ್ನು ಹೋಗಲಾಡಿಸಲು ಸಾಕಷ್ಟು ಶ್ರಮವಹಿಸಿದ್ದಾರೆ. ತಾವು ಮಾಡುವ ಕಾಯಕದಲ್ಲೇ ದೇವರನ್ನು ಕಂಡವರು. ಮೇಲು-ಕೀಳು ಎನ್ನದೇ ಸಮ ಸಮಾಜ ನಿರ್ಮಾಣ ಕ್ಕೆ ಶ್ರಮಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ತೋರಿಸಿಕೊಟ್ಟವರು ಎಂದರು.ಉಪನ್ಯಾಸಕರಾಗಿ ಭಾಗವಹಿಸಿದ ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ನಾಗರಾಜ ಆರ್. ಮಾಳಗಿ ಅವರು ಶಿವಶರಣರು ನಡೆದು ಬಂದ ದಾರಿ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಮಾತನಾಡಿದರು.ತಾಲೂಕು ಪಂಚಾಯತ ಅಧ್ಯಕ್ಷೆ ಕಮಲವ್ವ ಹೇಮನಗೌಡ ಪಾಟೀಲ ಅವರು ಉದ್ಘಾಟನೆ ನೆರವೇರಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಬ.ಸಂಗೂರ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ವಿಜಯಕುಮಾರ ಸಂತೋಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಶಶಿಕಲಾ ಹುಡೇದ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.