ಬೆಂಗಳೂರು, ಮಾ.19, ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಗ್ರಾಮ ಪಂಚಾಯತ್ ಡಂಪಿಂಗ್ ಯಾರ್ಡ್ ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಅದನ್ನು ಅಲ್ಲಿನ ಶಾಸಕರಾದ ಯು.ಟಿ.ಖಾದರ್ ಮತ್ತು ರಾಜೇಶ್ ನಾಯ್ಕ್ ಅವರು ಮಾತುಕತೆ ನಡೆಸಿ ಬಗೆಹರಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.
ಶೂನ್ಯವೇಳೆಯಲ್ಲಿ ಶಾಸಕ ಯು.ಟಿ.ಖಾದರ್ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿ ಉತ್ತರ ನೀಡಿದ ಅವರು, ಡಂಪಿಂಗ್ ಯಾರ್ಡ್ ಸಮಸ್ಯೆ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿದ ವಿಷಯ. ಅಲ್ಲಿ ಗೃಹ ಇಲಾಖೆ ಮಧ್ಯಪ್ರವೇಶಿಸುವುದಿಲ್ಲ. ಆದರೆ ಅಲ್ಲಿ ಅಶಾಂತಿ ನಿರ್ಮಾಣವಾಗಬಾರದು ಮತ್ತು ಘರ್ಷಣೆ ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಎಂದರು. ಇದಕ್ಕೂ ಮೊದಲು ಯು.ಟಿ.ಖಾದರ್ ಮಾತನಾಡಿ, ಸ್ಥಳೀಯರನ್ನು ಮತ್ತು ಗ್ರಾಮ ಪಂಚಾಯತ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಜಿಪ ಗ್ರಾಮದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಇಲ್ಲಿ ಸುಮಾರು 200 ಮನೆಗಳು, ಶಾಲೆಗಳಿಗೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ದಬ್ಬಾಳಿಕೆಯ ಮೂಲಕ ತ್ಯಾಜ್ಯ ಸುರಿಯಾಗುತ್ತಿದೆ. ತಕ್ಷಣ ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜೇಶ್ ನಾಯ್ಕ್ ಮಾತನಾಡಿ, ಸಜಿಪ ಪ್ರದೇಶದಲ್ಲಿ 10-12 ವರ್ಷಗಳಿಂದ ತ್ಯಾಜ್ಯ ಸುರಿಯಲಾಗುತ್ತಿದೆ. ಈ ಬಗ್ಗೆ ಸದನ ಸಮಿತಿಯನ್ನೂ ರಚಿಸಲಾಗಿತ್ತು. ತ್ಯಾಜ್ಯ ಸುರಿಯಲು ಬೇರೆ ಜಾಗವಿಲ್ಲ ಎಂದು ಹೇಳಿದರು.