ಉಡುಪಿ, ಡಿ 28, ಶಂಕಿತ ನ್ಯುಮೋನಿಯಾದಿಂದಾಗಿ
ಕಳೆದ ಶುಕ್ರವಾರದಿಂದ ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೆಜಾವರ
ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿಯವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ
"ಶ್ರೀಗಳವರಿಗೆ ಪ್ರಜ್ಞಾ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿಲ್ಲ, ಜೀವರಕ್ಷಕ ಸಾಧನಗಳ ಸಹಾಯದಲ್ಲಿದ್ದು,
ದೇಹಸ್ಥಿತಿ ಕ್ಷೀಣಿಸುತ್ತಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳನ್ನು
ಭೇಟಿ ಮಾಡಲು ಗಣ್ಯರು ಆಗಮಿಸುತ್ತಿದ್ದಾರೆ. ಆದರೆ ಶನಿವಾರದಿಂದ ಶ್ರೀಗಳ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ
ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶ್ರೀಗಳು ಇನ್ನೂ
ಕೂಡ ಜೀವ ರಕ್ಷಕ ಸಾಧನಗಳ ಸಹಾಯದಲ್ಲಿದ್ದು ದೇಹ ಸ್ಥಿತಿಯಲ್ಲಿ ಇಳಿಮುಖವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ
ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಿಬ್ಬರು ಶ್ರೀಗಳ
ಚಿಕಿತ್ಸೆಗೆ ಸಲಹೆ ನೀಡುತ್ತಿದ್ದಾರೆ. ಮಣಿಪಾಲದ ತಜ್ಞ ವೈದ್ಯರ ತಂಡವು ದಿಲ್ಲಿಯ ಏಮ್ಸ್ ತಜ್ಞರ ಸಂಪರ್ಕದಲ್ಲಿದ್ದರೂ
ಶುಕ್ರವಾರದಿಂದ ದೇಹ ಚೇತರಿಕೆ ಹಾಗೂ ಚಿಕಿತ್ಸೆಗೆ ಸ್ಪಂದನ ನಿಧಾನವಾಗಿದೆ ಎಂದು ಆಸ್ಪತ್ರೆ ಮೂಲಗಳು
ತಿಳಿಸಿವೆ. ಏತನ್ಮಧ್ಯೆ, ಕರ್ನಾಟಕ ಮುಖ್ಯಮಂತ್ರಿ
ಬಿ ಎಸ್ ಯಡಿಯೂರಪ್ಪ ಅವರು ಶನಿವಾರ ಆಸ್ಪತ್ರೆಯಿಂದ ವಿವರವಾದ ವರದಿಯನ್ನು ಪಡೆದುಕೊಂಡಿದ್ದಾರೆ. ಈ ವರೆಗೂ
ಹಲವಾರು ಗಣ್ಯರು ಶ್ರೀಗಳನ್ನು ಭೇಟಿ ಮಾಡಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮಿ
ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಮೂಲಕ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭೈಯಾಜಿ ಜೋಶಿ
ಕೂಡ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.