ಕೊಪ್ಪಳ: ಕನಕದಾಸರು ಸರ್ವರೂ ಸಮಾನರು ಎಂದು ಸಾರಿದ ಶ್ರೇಷ್ಠ ಸಂತರು. ಅವರ ಸಮಾನತೆಯ ತತ್ವ ನಮಗೆಲ್ಲರಿಗೂ ಆದರ್ಶನೀಯ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಎಚ್. ವಿಶ್ವನಾಥ ರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ದಂಡನಾಯಕನಾಗಿ ರಾಜರ ಆಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಯುದ್ಧಗಳಲ್ಲಿನ ಸಾವು ನೋವುಗಳಿಂದ ನೊಂದು, ದಂಡನಾಯಕನ ಹುದ್ದೆ ತೊರೆದು, ವ್ಯಾಸರಾಯರ ಶಿಷ್ಯರಾಗಿ ಸಾಮಾಜಿಕ ಸಮಾನತೆ, ಶಾಂತಿಗಾಗಿ, ವರ್ಗ ಭೇದಗಳ ನಿರ್ಮೂಲನೆಗಾಗಿ ಕೀರ್ತನೆಗಳ ಮೂಲಕ ಸಾಮಾಜಿಕ ಸಂದೇಶ ನೀಡಿದರು. ಜಾತಿ ವ್ಯವಸ್ಥೆಯ ವಿರುದ್ಧದ ಮನೋಭಾವನೆ ಹೊಂದಿದ್ದ ಅವರು ಕುಲ ಕುಲವೆಂದು ಹೊಡೆದಾಡಿ ಸಮಾಜದ ಶಾಂತಿಗೆ ಭಂಗ ತರಬೇಡಿ, ಇಲ್ಲಿ ಯಾರೂ ನಿಕೃಷ್ಟರಲ್ಲ ಎಂಬ ಮಹತ್ವದ ಸಂದೇಶ ಸಾರಿದರು. ಸರ್ವ ಜನಾಂಗಗಳ ಸಮಾನತೆಗೆ ಯುವಕರು ಕನಕದಾಸರನ್ನು ಮಾದರಿಯಾಗಿಟ್ಟುಕೊಂಡು ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಜಾತಿ ವ್ಯವಸ್ಥೆ ಮೀರಿ ಸಮಾನತೆಯ ತತ್ವ ಸಾರುತ್ತಾ ಸಂತರಾದರು. ಅವರ ಆದರ್ಶಗಳು ನಮಗೆಲ್ಲರಿಗೂ ಮಾರ್ಗದರ್ಶಕವಾಗಿವೆ. ಕೊಪ್ಪಳ ನಗರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಕನಕದಾಸರ ಪ್ರತಿಮೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಜಯಂತಿ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಗೆಯೇ ರೂ. 5 ಕೋಟಿ ವೆಚ್ಚದಲ್ಲಿ ಜಿಲ್ಲೆಯಲ್ಲಿ ಕನಕ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಯಲಬುರ್ಗಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವರಾಜ ಜಿ. ಗುರಿಕಾರ ಮಾತನಾಡಿ, ಕನಕದಾಸರು ದಂಡನಾಯಕರಾಗಿ ದಕ್ಷ ಆಡಳಿತಗಾರರಾಗಿದ್ದೂ ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವ ಸಲುವಾಗಿ ಸಾಮಾಜಿಕ ಸಂದೇಶ ಸಾರುವ ಸಂತರಾದರು. ಮೋಹನ ತರಂಗಿಣಿ, ರಾಮಧಾನ್ಯ ಚರಿತ, ನಳ ಚರಿತ್ರೆ, ಹರಿಭಕ್ತ ಸಾರ ಮುಂತಾದ ಸಾಮಾಜಿಕ ಸಂದೇಶಗಳುಳ್ಳ ರಚನೆಗಳನ್ನು ನೀಡಿದರು. ಸತ್ವಯುತ ತಪಸ್ಸಿನ ಮೂಲಕ ವ್ಯಾಸರಾಯರ ಶಿಷ್ಯನಾಗಿ, ತಲ್ಲಣಿಸದಿರು ಕಂಡ್ಯ ತಾಳು ಮನವೇ ಎನ್ನುತ್ತಾ ತಾಳ್ಮೆ ಮತ್ತು ನಿಗ್ರಹದ ಮೂಲಕ ಸಾಧನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ಅವರ ಸಾಹಿತ್ಯ, ಮುಂಡಿಗೆಗಳೂ, ಕೀರ್ತನೆಗಳು ಸಮಾಜದಲ್ಲಿ ಸಹಬಾಳ್ವೆ ಮೂಡಿಸುವಲ್ಲಿ ಮಾರ್ಗದರ್ಶಕವಾಗಿವೆ. ಅವರ ತತ್ವಗಳು ಎಂದಿಗೂ ಪ್ರಸ್ತುತವಾಗಿವೆ. ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು ಎಂದು ಮಾನವ ಧರ್ಮವನ್ನು ಪ್ರತಿಪಾದಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಾಲವತರ್ಿ ಸಂಸ್ಥಾನಮಠದ ಶಿವಸಿದ್ದೇಶ್ವರ ಸ್ವಾಮೀಜಿ ಕನಕದಾಸರ ತತ್ವ, ಆದರ್ಶಗಳ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಸಿದ್ಧಲಿಂಗೇಶ ಕೆ. ರಂಗಣ್ಣವರ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲರಾದ ಸಿ.ವಿ. ಜಡಿಯವರ ನಿರೂಪಿಸಿದರು. ಕಲಾವಿದರಾದ ಪಾಷಾ ಹಾಗೂ ಅವರ ತಂಡ ನಾಡಗೀತೆ, ಕನಕದಾಸರ ಕೀರ್ತನೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಡಿವೈಎಸ್ಪಿ ವೆಂಕಟಪ್ಪ ನಾಯಕ, ತಹಶೀಲ್ದಾರ ಜೆ.ಬಿ. ಮಜ್ಗಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್.ಎಚ್. ಮುರಡಿ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಹಂತದ ಜನಪ್ರತಿನಿಧಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.