ತಾಯಿ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ

ಲೋಕದರ್ಶನ ವರದಿ

ಶೇಡಬಾಳ 02: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನವ್ಹೆಂಬರ 1 ರಂದು ಮಂಗಸೂಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಎಂಇಎಸ್ ನವರು ಕರೆ ನೀಡಿದ್ದ ಮಂಗಸೂಳಿ ಬಂದ್ಗೆ ಯಾರು ಸ್ಪಂದಿಸದೇ ಇರುವುದರಿಂದ ಅವರು ನೀಡಿದ್ದ ಬಂದ್ ಕರೆ ಠುಸ್ ಆಯಿತು. ಕರ್ನಾಟಕ ರಾಜ್ಯೋತ್ಸವ ವಿಭೃಂಭಣೆಯಿಂದ ಜರುಗಿರುವುದರಿಂದ ಮರಾಠಿಗರು ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ.

  ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಗಡಿ ಭಾಗದ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಲವೇ ಕೆಲವು ಪುಂಡ ಪೋಕರಿಗಳು ಕರಾಳ ದಿನಾಚರಣೆಗೆ ಕರೆ ಕೊಟ್ಟಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆಗಳು ಕನ್ನಡಾಭಿಮಾನಿಗಳು ಕನ್ನಡ ರಾಜ್ಯೋತ್ಸವವನ್ನು ಎಂದಿನಂತೆ ವಿಜೃಂಭನೆಯಿಂದ ಆಚರಿಸಿದರು.

  ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ ಪೂಜೆ ಸಲ್ಲಿಸಿ ಮಾತನಾಡುತ್ತಾ ಗಡಿ ಭಾಗದ ಮಂಗಸೂಳಿ ಗ್ರಾಮವು ಮರಾಠಿ ಸಂಸ್ಕೃತಿಯ ಊರು. ಪ್ರತಿ ವರ್ಷವು ಇಲ್ಲಿ ಮರಾಠಿ ಸಹೋದರರು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಕೆಲವೊಂದು ಜನ ವಿರೋಧ ಮಾಡುತ್ತ ಬಂದಿದ್ದರು. ಆದರೆ ಇವತ್ತಿನ ದಿನಮಾನಗಳಲ್ಲಿ ಕನ್ನಡ ಮಯ ವಾತಾವರಣ ಗ್ರಾಮದಲ್ಲಿ ಗಟ್ಟಿಗೊಳ್ಳುತ್ತಿದೆ. ಮರಾಠಿಗರು ಕೂಡ ಕನ್ನಡ ಭಾಷೆ, ಸಂಸ್ಕೃತಿಯನ್ನು ಪ್ರೀತಿಸುತ್ತ ಗೌರವಿಸುತ್ತ ಬರುತ್ತಿರುವುದಕ್ಕೆ ಇಂದಿನ ಭವ್ಯ ಮೆರವಣಿಗೆಯೇ ಸಾಕ್ಷಿ ಎಂದರು. 

  ಗ್ರಾಮ ಪಂಚಾಯತ್ ಹಾಗೂ ಹಲವಾರು ಕನ್ನಡಪರ ಸಂಘಟನೆಗಳು ಆನೆಯ ಮೇಲೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ಇಟ್ಟು ಹಲವಾರು ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಕೈಗೊಂಡರು. ಮೆರವಣಿಗೆಯುದ್ದಕ್ಕೂ ಕನ್ನಡ ಪರ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಗ್ರಾಮದಲ್ಲೆಲ್ಲ ಕೈಗೊಂಡರು. ಮೆರವಣಿಗೆಯ ಉದ್ದಗಲಕ್ಕೂ ಕೈಯಲ್ಲಿ ಕನ್ನಡದ ಭಾವುಟಗಳನ್ನು ಹಿಡಿದುಕೊಂಡು ಎಲ್ಲಾ ಭಾಷಾ ಬಾಂಧವರು ಜಾತಿ,ಮತ ಬೇಧವನ್ನು ಮರೆತು ನಾವೆಲ್ಲರು ಕನ್ನಡಿಗರು ಎಂಬ ಉದಾತ್ತ ಭಾವನೆಯಿಂದ ಸಹಕಾರ ನೀಡಿದ್ದಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕನ್ನಡ ಪ್ರೇಮಕ್ಕೆ ಸಾಕ್ಷಿಯಾಯಿತು.

ಕನ್ನಡದ ಹುಚ್ಚುರಾಯ: ಕನ್ನಡದ ಹುಚ್ಚುರಾಯ ಎಂದೇ ಪ್ರಖ್ಯಾತರಾದ ಶೇಡಬಾಳ ಪಟ್ಟಣದ ಎಂ.ಡಿ ಅಲಾಸೆಯವರು ತಮ್ಮದೇ ಶೈಲಿಯಲ್ಲಿ ಹಳದಿ ಶರ್ಟ, ಕೆಂಪು ಪ್ಯಾಂಟು ಧರಿಸಿ ಕೈಯಲ್ಲಿ ಕನ್ನಡದ ದ್ವಜವನ್ನು ಹಿಡಿದುಕೊಂಡು ಮೆರವಣಿಗೆಯುದ್ದಕ್ಕೂ ಧ್ವಜವನ್ನು ಹಾರಾಡಿಸುತ್ತ, ಕನ್ನಡ ಪರ ಘೋಷಣೆಗಳನ್ನು ಕೂಗುತ್ತಿರುವುದು ಎಲ್ಲರ ಗಮನ ಸೆಳೆದರು.

 ಈ ವೇಳೆ ಅಥಣಿ ಸಿಪಿಐ ಶಂಕರಗೌಡ ಬಸಗೌಡರ, ಪಿಎಎಸ್ಐ ಹಣಮಂತ ಶಿರಹಟ್ಟಿ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷ ಅಮರ ಪಾಟೀಲ, ಅಭಿವೃದ್ಧಿ ಅಧಿಕಾರಿ ಎಂ.ಆರ್. ಹಿರೇಮಠ, ಅಶೋಕ ಪುಜಾರಿ, ಚಿದಾನಂದ ಮಾಳಿ, ಸಂಜಯ ಶೆಟ್ಟಿ, ಸುಭಾಷ ಪೂಜಾರಿ, ಉಮೇಶ ಪೂಜಾರಿ, ಮಲ್ಲಪ್ಪ ಮಗದುಮ್, ಸಾವಂತ ಕೆಂಗಾರಿ, ಸುಖದೇವ ನಾಯಿಕ, ದಾದು ಮಾಳಿ, ಕಿರಣ ಮಾಳಿ, ಸಂತೋಷ ಸನದಿ, ವಿನಾಯಕ ಸನದಿ, ಅಜೀತ ಗಾವಡೆ, ಸಚೀನ ನಾಯಿಕ, ಅಣ್ಣಪ್ಪ ನಾಯಿಕ ಸೇರಿದಂತೆ ನೂರಾರು ಕನ್ನಡಪರ ಅಭಿಮಾನಿಗಳು ಪಾಲ್ಗೊಂಡಿದ್ದರು.