ನವದೆಹಲಿ, ಫೆ 10 : ಉದ್ಯೋಗಗಳಲ್ಲಿ ಬಡ್ತಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸಮಗ್ರವಾಗಿ ಪರಿಗಣಿಸಿದ ನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಸೋಮವಾರ ರಾಜ್ಯಸಭೆಗೆ ತಿಳಿಸಿದೆ.
ಸದನಕ್ಕೆ ಈ ಕುರಿತು ಮಾಹಿತಿ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್,’ ಈ ವಿಷಯವನ್ನು ಸರ್ಕಾರ ಪರಿಗಣಿಸುತ್ತಿದೆ
ಈ ವಿಷಯದಲ್ಲಿ ಸರ್ಕಾರವು ಒಂದು ಪಕ್ಷವಲ್ಲವಾದರೂ, ಸರಿಯಾದ ಪರಿಗಣನೆಯ ನಂತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ.’ ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ-ಪಂಗಡಗಳ ಮೇಲಿನ ದೌರ್ಜನ್ಯ ತಿದ್ದುಪಡಿ ಕಾಯ್ದೆ 2018 ರ ಸಿಂಧುತ್ವ ವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಪರಿಶಿಷ್ಟ ಜಾತಿ-ಪಂಗಡಗಳ ಮೇಲೆ ದೌರ್ಜನ್ಯದ ಆರೋಪ ಹೊತ್ತಿರುವ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡುವ ಯಾವುದೇ ನಿಬಂಧನೆಯನ್ನು ನ್ಯಾಯಲಯ ನಿರಾಕರಿಸಿದೆ.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಈ ಕಾಯ್ದೆಯಡಿ ಎಫ್ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ವಿಚಾರಣೆ ಅನಿವಾರ್ಯವಲ್ಲ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿಯೂ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮಾರ್ಚ್ 20, 2018 ರಂದು ಅಂಗೀಕರಿಸಿದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು .ಈಗ ಕೇಂದ್ರಕ್ಕೆ ಒಂದು ರೀತಿ ಹಿನ್ನಡೆಯಾದಂತಿದೆ.
2012ರ ಉತ್ತರಾಖಂಡ ಸರ್ಕಾರದ ಅಧಿಸೂಚನೆಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸುವುದು ಸರ್ಕಾರದ ಹೊಣೆಗಾರಿಕೆಯಾಗದಿದ್ದರೆ, ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಕಾನೂನು ಬಾಹಿರ ಎಂದು ಘೋಷಿಸಬಾರದು ಎಂದು ಹೇಳಿದೆ.
2012ರಲ್ಲಿ ಉತ್ತರಾಖಂಡದಲ್ಲಿ ಎನ್ ಡಿಎ ಸರ್ಕಾರ ಅಧಿಕಾರದಲ್ಲಿರಲಿಲ್ಲ ಎಂದು ಪ್ರತಿಪಾದಿಸಿದ ಗೆಹ್ಲೋಟ್, ಆ ಸಮಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂದು ಹೇಳಿದರು.
ಸಚಿವರು ಈ ಹೇಳಿಕೆ ನೀಡುತ್ತಿದ್ದಂತೆ, ಕಾಂಗ್ರೆಸ್ ನ ಪಿ ಎಲ್ ಪುನಿಯಾ ಮಾತನಾಡಿ, ಬಡ್ತಿಯಲ್ಲಿ ಮೀಸಲಾತಿಯು ಯಾರೊಬ್ಬರ ಮೂಲಭೂತ ಹಕ್ಕಲ್ಲ ಎಂದು ಈಗಿನ ಉತ್ತರಾಖಂಡ ಸರ್ಕಾರ ಹೇಳಿದೆ. ಹಿಂದಿನ ಕಾಂಗ್ರೆಸ್ ಸರ್ಕಾವಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸುತ್ತದೆಯೇ ಎಂದು ಸಿಪಿಐ (ಎಂ) ನ ಬೆನಾಯ್ ವಿಶ್ವಮ್ ಪ್ರಶ್ನಿಸಿದರು.
ಮೀಸಲಾತಿ ಹಕ್ಕುಗಳನ್ನು ಕಸಿದುಕೊಳ್ಳದಂತೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಡಿಎಂಕೆಯ ತಿರುಚ್ಚಿ ಶಿವಾ ಅವರು ಸರ್ಕಾರವನ್ನು ಒತ್ತಾಯಿಸಿದರು.
ಸುಪ್ರೀಂಕೋರ್ಟ್ ನ ತೀರ್ಪನ್ನು ‘ಕಾನೂನುಬಾಹಿರ ಹಾಗೂ ತಪ್ಪು’ ಎಂದ ಬಿಎಸ್ ಪಿಯ ಸತೀಶ್ ಚಂದ್ರ ಮಿಶ್ರಾ, ಸರ್ಕಾರದಿಂದ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ, ಈ ಪ್ರಕರಣದಲ್ಲಿ ಸರ್ಕಾರ ತಾನು ಒಂದು ಪಕ್ಷವಾಗಬೇಕು ಎಂದು ಹೇಳಿದರು.