ಉತ್ತಮ ಕಾರ್ಯನಿರ್ವಹಣೆಯ ಗುರಿ; ಮೂರು ವಿಭಾಗಗಳಾಗಿ ಸಿಸಿಬಿ ವಿಂಗಡನೆ

   ಬೆಂಗಳೂರು, ನ 5:   ಉತ್ತಮ ಕಾರ್ಯನಿರ್ವಹಣೆಗಾಗಿ ಕೇಂದ್ರ ಅಪರಾಧ ದಳ (ಸಿಸಿಬಿ)ಯನ್ನು ಮೂರು ಪ್ರತ್ಯೇಕ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಸಿಸಿಬಿ ಇನ್ನು ಮುಂದೆ ಭಯೋತ್ಪಾದನೆ ನಿಗ್ರಹ ಕೋಶ (ಎಟಿಸಿ),  ಮಾದಕ ವಸ್ತು ವಿರೋಧಿ ವಿಭಾಗ  ಮತ್ತು  ಮಹಿಳಾ ರಕ್ಷಣಾ ವಿಭಾಗವಾಗಿ ಕಾರ್ಯನಿರ್ವಹಿಸಲಿದೆ. ಈ ಕುರಿತು ಮಾಹಿತಿ ನೀಡಿರುವ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ, ಉಗ್ರವಾದಿ ಚಟುವಟಿಕೆ ಮೇಲೆ ನಿಗಾ, ಮಾದಕ ವಸ್ತುಗಳ ಜಾಲ ನಿಯಂತ್ರಣ ಹಾಗೂ ಮಹಿಳೆಯರಿಗೆ ರಕ್ಷಣೆ ಕುರಿತು ಪ್ರತ್ಯೇಕವಾಗಿ ಗಮನ ಹರಿಸುವ ಸಲುವಾಗಿ ಸಿಸಿಬಿಯನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ ಎಂದಿದ್ದಾರೆ. ಈ ವಿಭಾಗಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ, ಈ ವಿಭಾಗಗಳಿಗೆ ನೀಡಿರುವ ಜವಾಬ್ದಾರಿಗಳ ಕುರಿತು ಬಹಿರಂಗಪಡಿಸಲಾಗದು. ಈ ವಿಭಾಗಗಳ ನೇತೃತ್ವವನ್ನು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ದರ್ಜೆಯ ಅಧಿಕಾರಿಗಳು ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಮಾದಕ ವಸ್ತು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಒಂದೇ ವಿಭಾಗ ನೋಡಿಕೊಳ್ಳುತ್ತಿದೆ. ಇನ್ನು ಮುಂದೆ ಈ ಘಟಕ ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಚಟುವಟಿಕೆ ಮೇಲೆ ಮಾತ್ರ ನಿಗಾ ವಹಿಸಲಿದೆ. ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ವಿಭಾಗ ರಚಿಸಲಾಗುವುದು ಎಂದೂ ಅವರು ವಿವರಿಸಿದ್ದಾರೆ.