ಅನರ್ಹರನ್ನು ಸೋಲಿಸುವುದೇ ಗುರಿ: ಡಿಕೆಶಿ

Dikeshi

ಬೆಂಗಳೂರು, ಡಿ. 3 - ಅನರ್ಹರನ್ನು ಸೋಲಿಸುವುದೇ ತಮ್ಮ ಗುರಿಯಾಗಿದ್ದು, ಪಕ್ಷಕ್ಕೂ  ಹಾಗೂ ಜನರಿಗೂ ಮೋಸ ಮಾಡಿದವರನ್ನು ಮತದಾರರು ಪುನರ್ ಆಯ್ಕೆ ಮಾಡುವುದಿಲ್ಲ ಎಂದು ಮಾಜಿ  ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಹಿರಂಗ ಪ್ರಚಾರದ  ಕೊನೆಯ ದಿನವಾದ ಮಂಗಳವಾರ ಹೊಸಕೋಟೆ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ  ಪ್ರಚಾರಕ್ಕೆ  ತೆರಳುವ ಮುನ್ನ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಹಿರಿಯ  ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಮಾಜಿ ಲೋಕಾಯುಕ್ತ ಸಂತೋಷ ಹೆಗ್ಟೆ, ನ್ಯಾಯಮೂರ್ತಿ ಗೋಪಾಲಗೌಡರು, ಸಾಹಿತಿ ದೇವನೂರು ಮಹದೇವ ಸೇರಿದಂತೆ ಹಲವು ಗಣ್ಯರು ಅನರ್ಹರು ಸೋಲಬೇಕು, ಪ್ರಜಾಪ್ರಭುತ್ವ  ಉಳಿಸಬೇಕು ಎಂದು ಕರೆದ್ದಾರೆ. ಜನರು ಅನರ್ಹರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯ  ಕಾಂಗ್ರೆಸ್ ಉಸ್ತುವಾರಿ ಕೆ.ಸಿವೇಣುಗೋಪಾಲ್ ಹಿರಿಯ ನಾಯಕರಿಗೆ ಜವಾಬ್ದಾರಿ ಹಂಚಿಕೆ  ಮಾಡಿದ್ದಾರೆ. ಅದರಂತೆ ತಮಗೆ ನೀಡಿದ ಜವಾಬ್ದಾರಿಯನ್ನು ನಿಬಾಯಿಸುತ್ತಿದ್ದೇನೆ. ಬೇರೆ  ಯಾವ ರಾಜ್ಯದಲ್ಲಿಯೂ ಆಪರೇಷನ್ ಕಮಲ ನಡೆಯುವುದಿಲ್ಲ. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ  ಮುಖ್ಯಮಂತ್ರಿಯಾದಾಗ ಈ ಆಪರೇಷನ್ ಕಮಲ ಇಲ್ಲಿ ಸಾಮಾನ್ಯ ಎಂಬಂತಾಗಿದೆ. ನೆಮ್ಮದಿಯಾಗಿ ಕೆಲಸ ಮಾಡಲು  ಆಗುತ್ತಿಲ್ಲ ಎಂದು ಹೇಳುವ ಯಡಿಯೂರಪ್ಪ ಸಂದಿಗ್ಧ ಪರಿಸ್ಥಿತಿಯಲ್ಲಿ ಅಧಿಕಾರ ಏಕೆ ನಡೆಸಬೇಕು. ಇಂತಹ‌ ಪರಿಸ್ಥಿತಿ ನಿರ್ಮಾಣ ಕ್ಕೆ ಯಡಿಯೂರಪ್ಪರೇ ಸ್ವಯಂಕೃತ ಕಾರಣ ಎಂದು ತಿರುಗೇಟು ನೀಡಿದರು.