ಕೊಪ್ಪಳ 19: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಪಿಡಿಯಾಮಿಲಾಜಿ ವಿಭಾಗ ಜನ ಆರೋಗ್ಯ ಕೇಂದ್ರ, ನಿಮ್ಹಾನ್ಸ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್. 17ರಂದು ಕೊಪ್ಪಳದ ಕಾಳಿದಾಸ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಯುವ ಸ್ಪಂದನ ಕೇಂದ್ರದ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಯುವ ಸ್ಪಂದನದ ಯುವ ಪರಿವರ್ತಕರಾದ ನೇತ್ರಾವತಿ ರಾಟಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿನಿಯರು ಆಧುನಿಕ ಯುಗದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಆತಂಕಕ್ಕೆ ಒಳಗಾಗಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಆದರೆ ಅವುಗಳನ್ನು ಯಾವ ರೀತಿಯಾಗಿ ಧೈರ್ಯದಿಂದ ಎದುರಿಸಬೇಕು ಎಂಬುದರ ಕುರಿತಾಗಿ ಯುವಸ್ಪಂದನ ಅರಿವು ಕಾರ್ಯಕ್ರಮ ಜಾರಿಗೆ ಬಂದಿದೆ. ಯುವ ಸ್ಪಂದನ ಕೇಂದ್ರದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಯುವ ಜನತೆ ವೈಫಲ್ಯದ ಭಯದಿಂದ, ಪರೀಕ್ಷೆಯ ಆತಂಕದಿಂದ ಖಿನ್ನತೆಗೆ ಬಲಿಯಾಗುತ್ತಿದ್ದಾರೆ. ಯುವಜನತೆ ಅನುಭವಿಸುತ್ತಿರುವ ಸಮಸ್ಯೆಗಳು, ಸುರಕ್ಷತೆ, ಭಾವನಾತ್ಮಕ ಹತೋಟಿ, ಲಿಂಗ ಮತ್ತು ಲೈಂಗಿಕತೆ, ಆರೋಗ್ಯ, ಜೀವನ ಶೈಲಿ ಮತ್ತು ವರ್ತನೆ, ಶಿಕ್ಷಣ ಮತ್ತು ಪಠ್ಯ ವಿಷಯ, ವ್ಯಕ್ತಿತ್ವ ಬೆಳವಣಿಗೆ, ನಿರ್ಧಾರ ತೆಗೆದುಕೊಳ್ಳುವಿಕೆ, ಉದ್ಯೋಗ ಈ ವಿಷಯಗಳಲ್ಲಿ ಯಾವುದೇ ಗೊಂದಲಗಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಪ್ರಾಚಾರ್ಯರಾದ ನಾಗನಗೌಡ ಜುಮ್ಮನ್ನವರ್ ಮಾತನಾಡಿ, ಯುವ ಸ್ಪಂದನ ಕೇಂದ್ರದ ಮಾರ್ಗದರ್ಶನ ಅವಶ್ಯಕ. ಆಧುನಿಕ ಜಗತ್ತು ಬಹಳಷ್ಟು ಮುಂದುವರೆದಿದ್ದು, ಹಾಗೆಯೇ ಮಕ್ಕಳ ವಿದ್ಯಾಭ್ಯಾಸದಲ್ಲೂ ಬಹಳಷ್ಟು ಬದಲಾವಣೆ ಕಾಣಬೇಕು ಕೆಲವೊಂದು ಆಂತರಿಕ ಸಮಸ್ಯೆಗಳು ಅತಿರೇಕವಾಗಿ ಕಂಡುಬರುತ್ತವೆ. ಅಂತಹ ಸಮಸ್ಯೆ ಹಾಗೂ ಗೊಂದಲಗಳ ನಿವಾರಣೆ ಮತ್ತು ಅವುಗಳನ್ನು ಎದುರಿಸಿ ಜೀವನವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಹಾಗೂ ಇತರೆ ವಿಷಯಗಳ ಸಮಾಲೋಚನೆಗಾಗಿ ಈ ಯುವ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯುವಸ್ಪಂದನದ ಯುವಪರಿವರ್ತಕರು, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.