ಪಿಳಿಗೆ ನಡುವಿನ ಅಂತರವೆ ಪರಿವರ್ತನೆ

ದಿನದಿಂದ ದಿನಕ್ಕೆ ಬದಲಾವಣೆ ಎನ್ನುವದು ಸಹಜಕ್ರಿಯೆ. ಇತಿಹಾಸವನ್ನು ನಾವು ನೋಡಿದಾಗ ಅದೆಷ್ಟು ಮುಂದುವರೆದು ನಿಂತಿದ್ದೇವೆ ಎನ್ನುವ ಅರಿವಾಗುತ್ತದೆ. ಈ ಪರಿವರ್ತನೆಯು ಹರಿಯುವ ನೀರಿನಂತೆ. ತಾಜಾ ಮತ್ತು ಸ್ವಚ್ಚತೆಯನ್ನು ಬಯಸುತ್ತದೆ. ಅಲ್ಲದೇ ಸುಲಭವಾಗಿ ನಿಲುವುದುದಕ್ಕಾಗಿ ಆಸೆ ಪಡುತ್ತದೆ. ಹಾಗೆಯೇ ಹೊಸ ಪೀಳಿಗೆಗೂ, ಹಳೆ ತಲೆಮಾರಿಗೂ ಅಜಗಜಾಂತರ ಅಂತರವಿರುವುದು ಗಮನಿಸಬಹುದು.ಆಹಾರ ಸೇವನೆಯಲ್ಲಿ, ಉಡುಗೆ ತೊಡುವುದರಲ್ಲಿ, ಆಟ ಪಾಠಗಳಲ್ಲಿ, ಈಗಿನ ಮಕ್ಕಳ ಅಭಿರುಚಿಗಳಲ್ಲಿ ನಾವು ಸಾಕಷ್ಟು ಪ್ರಮಾಣದ ವ್ಯತ್ಯಾಸವನ್ನು ಕಾಣುತ್ತೇವೆ. ಪ್ರತೀ ತಲೆಮಾರು ಕೂಡ ನಮ್ಮಂತೆ ನಮ್ಮ ಮಕ್ಕಳಿಲ್ಲ ಎನ್ನುತ್ತೇವೆ ಎಂದರೆ ಅಲ್ಲೊಂದು ಕಾಣದೇ ಹೋದರೂ ಬದಲಾವಣೆ ಆಗಿದೆ ಎಂದೆ ಅರ್ಥ.   

ಹಾಗಿರುವಾಗ ನನ್ನಂತೆ ನನ್ನ ಮಗ/ ಮಗಳು ಇಲ್ಲ ಎಂದು ದೂರುವುದು ಸರಿಯಲ್ಲ. ಮಕ್ಕಳ ಅಭಿರುಚಿ ಬದಲಾಗಲು ನಾವು ಕಂಡು ಹಿಡಿದ ಅನೇಕ ರೀತಿಯ ಸವಲತ್ತುಗಳೇ ಕಾರಣ ಅಲ್ಲವೆ. ನಾವು ಹೇಳುತ್ತೇವೆ, ಈ ಬೇಸಿಗೆ ರಜೆಯಲ್ಲಿ ನಾವಾಗಿದ್ದರೆ ಸೈಕಲ್ ಆಡುತ್ತಿದ್ದೇವು. ಕ್ರಿಕೇಟ್ ಆಡುತ್ತಿದ್ದೇವು. ಗೇರು ಮರ ಹತ್ತುತ್ತಿದ್ದೇವು ಈ ಮಕ್ಕಳು ಮೊಬೈಲ್ ಹಿಡಿದು ಕೂರುತ್ತಾರೆ ಎಂದು ಬೇಸರಿಸುವುದು ಇದೆ. ನಿಜ ನಮ್ಮ ಆ ದಿನಗಳಿಗೂ ಈ ದಿನಗಳಿಗೂ ಹೋಲಿಸಿ ನೋಡುವ ಮೊದಲು ನಾವು ನಮ್ಮ ಹಿರಿಯರ ಜೀವನವನ್ನು ಎಷ್ಟು ಅಡವಳಿಸಿಕೊಂಡು ಈಗ ನಡೆಯುತ್ತಿದ್ದೇವೆ ಎನ್ನುವುದನ್ನು ಒಮ್ಮೆ ನೋಡಿಕೊಳ್ಳಬೇಕು. ಮೊದಲೆಲ್ಲ ಸಾಹಿತ್ಯ, ಸಂಗೀತ ಕ್ಷೇತ್ರಗಳೆಂದರೆ ಅದೆಷ್ಟು ಗೌರವವಿತ್ತು. ಈಗ ಸಿನೆಮಾ ತಾರೆಯರೇ ದೊಡ್ಡ ವ್ಯಕ್ತಿಗಳಾಗಿ ಕಾಣಿಸುತ್ತಾರೆ. ಅಜ್ಜ ಅಜ್ಜಿಯರು ಹೇಳುವ ಯಾವ ಶ್ಲೋಕ ಅಥವಾ ಮಂತ್ರಗಳು ನಮಗೆ ಬರುವುದಿರಲಿ, ಅಂಥದ್ದೊಂದು ಶ್ಲೋಕ ಇದೆ ಎಂದು ತಿಳಿದುಕೊಳ್ಳುವ ಗೌಜಿಗೂ ಹೋಗಿಲ್ಲ. ಹಾಗಿದ್ದಾಗ ನಮ್ಮ ಮಕ್ಕಳಿಗೆ ನಾವು ಏನು ಹೇಳಿಕೊಟ್ಟಿದ್ದೇವೆ. ನಮ್ಮ ಪೂರ್ವಿಕರು ಬಿಟ್ಟು ಹೋದ ಯಾವ ಸಂಸ್ಕಾರ ನಾವು ಅವರಿಗೆ ಕೊಟ್ಟಿದ್ದು. ಇದರ ಬಗ್ಗೆ ಸ್ವಲ್ಪವಾದರೂ ಯೋಚಿಸಬೇಕು.   

ಮೊನ್ನೆ ಹತ್ತನೇ ತರಗತಿಯ ಫಲಿತಾಂಶ ಬಂದಿತು. ಮಕ್ಕಳು ಒಳ್ಳೆಯ ಅಂಕ ಪಡೆದರು. 145 ಮಕ್ಕಳು 625 ಮಾರ್ಕಿಗೆ ಬರೆದ ಉತ್ತರವೆಲ್ಲವೂ ಸರಿಯಾಗಿ 625 ಅಂಕ ಪಡೆದು ವಿಜೇತರಾದರು. ಹೆಚ್ಚಿನ ಮಕ್ಕಳಿಗೆ ಒಳ್ಳೆಯ ಅಂಕಗಳೇ ಸಿಕ್ಕಿವೆ. ಇದೆಲ್ಲ ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಇತ್ತು. ಅವರ ಪ್ರಶ್ನೆ ತಮ್ಮ ಓದಿಗೂ ಈಗಿನ ಓದಿಗೂ ಹೋಲಿಸಿ ನೋಡುವುದು. ತಾವು ಪಸ್ಟ್‌ ಕ್ಲಾಸ್ ಬರಲು ಅದೆಷ್ಟು ಸಂಭ್ರಮಿಸುತ್ತಿದ್ದೇವು. ಆಗಿನ ಶಿಕ್ಷಣ ಈಗಿಲ್ಲ. ಎಲ್ಲವೂ ಸಡಿಲವಾಗಿದೆ. ಹಾಗಾಗಿ ಮಕ್ಕಳು ಹೆಚ್ಚಿಗೆ ಅಂಕ ಪಡೆಯುತ್ತಾರೆ. ಇದರಿಂದ ನೈಜ ಮಕ್ಕಳ ಬುದ್ಧಿ ಕೌಶಲ್ಯತೆ ಕಡಿಮೆಯಾಗುತ್ತದೆ. ಇದು ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೂ ಹೊಡೆತ ಕೊಡಬಹುದು ಎನ್ನಿಸುತ್ತಿದೆ ಎಂದೆಲ್ಲ ಹೇಳಿದ್ದರು. ಅವರು ಹೇಳಿದ್ದರಲ್ಲಿ ಸತ್ಯವಿಲ್ಲ ಎಂದಲ್ಲ. ಆದರೆ ಪೂರ್ತಿ ಒಪ್ಪಿಕೊಳ್ಳಲಾಗುವುದಿಲ್ಲ.   

ನಾವು ಚಿಕ್ಕವರಾಗಿರುವಾಗ ನಮಗಿದ್ದ ತಿಳುವಳಿಕೆಗೂ ಈಗಿನ ಮಕ್ಕಳ ತಿಳುವಳಕೆಗೂ ತುಂಬಾ ವ್ಯತ್ಯಾಸವಿದೆ. ಆಗ ನಮಗೆ ಶಿಕ್ಷಣ ದೊಡ್ಡದಾಗಿರಲೇ ಇಲ್ಲ. ಅಪ್ಪ ಅಮ್ಮ ಶಾಲೆಗೆ ಕಳಿಸುತ್ತಾರೆ ನಾವು ಹೋಗುತ್ತೇವೆ. ಕೆಲವೇ ಬೆರಳೆಣಿಕೆಯ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಹೆಚ್ಚಿನದಾಗಿ ಕೊಡಿಸುವ ಯೋಚನೆ ಮಾಡುತ್ತಿದ್ದರು. ಉಳಿದವರು ಏಳನೆಯತ್ತಿಯೋ ಹತ್ತನೇ ತರಗತಿಯೋ ಕಲಿತರೆ ಸಾಕು ಮಾರಾಯ ಮನೆಯಲ್ಲಿ ಆಸ್ತಿ ಇದೆ ನೋಡಿಕೊಳ್ಳಲಿ ಎನ್ನುವ ಇರಾದೆ ಒಂದಾದರೆ, ಇನ್ನು ಹೆಣ್ಣೂ ಮಕ್ಕಳು ಎಷ್ಟು ಕಲಿತರೂ ಮದುವೆ ಮಾಡ್ಲೆ ಬೇಕಲ್ಲ. ಅವರಿಗೆ ಬಸ್ ಬೋರ್ಡ್‌ ಓದಲೋ, ಅವರ ಮಕ್ಕಳಿಗೆ ಕಲಿಸಲೋ ಬಂದರೆ ಸಾಕು ಎನ್ನುವಂಥದ್ದು ಮಾತ್ರ ಪಾಲಕರ ತಲೆಯಲ್ಲಿತ್ತು. ಈಗ ಕಾಲ ಬದಲಾಗಿದೆ. ಪ್ರತೀ ಮಗುವು ತಾನು ಓದಬೇಕು, ಉದ್ಯೋಗ ಮಾಡಬೇಕು, ತನ್ನ ಕಾಲ ಮೇಲೆ ನಿಲ್ಲಬೇಕು ಎಂದು ಬಯಸುತ್ತದೆ. ಅಪ್ಪನ ಆಸ್ತಿಗಾಗಲಿ, ವೈವಾಹಿಕ ಜೀವನಕ್ಕಾಗಲಿ ಅಷ್ಟೊಂದು ಬೇಗನೇ ಒಪ್ಪಿಕೊಂಡು ಬಿಡುವುದಿಲ್ಲ.  

ನಮ್ಮ ತಾಯಿಂದಿರು ಎಲ್ಲರು ನಮಗೆ ಅಡುಗೆ ಮನೆಯ ಕೆಲಸವೇ ಮೊದಲು ಎಂದು ಹೇಳಿಕೊಟ್ಟ ಪಾಠ ನೆನಪಿದೆ ಅಲ್ಲವಾ. ನಾಳೆ ಗಂಡನ ಮನೆಗೆ ಹೋಗಿ ಅಡಗೆ ಮಾಡದಿದ್ದರೆ ಅವರು ನಿನ್ನ ತಾಯಿ ಕಲಿಸಿದ್ದೇನು ಅಂತ ನನ್ನನ್ನು ಜರಿಯುತ್ತಾರೆ. ಮೊದಲು ಅಡುಗೆ ಕಲಿಬೇಕು. ಶಾಲೆ ಕಲಿತು ಉದ್ಧಾರ ಆಗುವುದು ಅಷ್ಟರಲ್ಲೇ ಇದೆ ಎನ್ನುತ್ತಿದ್ದರು. ಆದರೆ ಈಗ ನಾವು ನಮ್ಮ ಮಕ್ಕಳಿಗೆ ಅಡುಗೆ ಮನೆಯನ್ನೇ ಸರಿಯಾಗಿ ತೋರಿಸುವುದಿಲ್ಲ. ಹೆಚ್ಚೆಂತರೆ ಒಂದು ಚಹಾ, ಪಲಾವು, ಮ್ಯಾಗಿ, ರೈಸ್ ಬಾತ್ ಅಂತ ಹೇಳಿ ಇಷ್ಟನ್ನು ಮಾತ್ರ ಕಲಿಸಿಬಿಡುತ್ತಿದ್ದೇವೆ. ಸಿಹಿತಿಂಡಿಗಳು, ನಮ್ಮ ಕಾಲದ ಪದಾರ್ಥಗಳು ಈಗಿನ ಮಕ್ಕಳಿಗೆ ಮಾಡಲು ಬರುವುದಿಲ್ಲ. ಹಾಗಂತ ಅವರು ದಡ್ಡರೆ! ಖಂಡಿತ ಅಲ್ಲ. ಅವರ ಕಲಿಕೆ ಮುಗಿದು ಸ್ವಲ್ಪ ಸಮಯ ಸಿಗಲಿ ಈಗನ ಮೊಬೈಲ್ ಯುಗದಲ್ಲಿ ಅಲ್ಲಿ ಬರುವ ಅಡುಗೆಯನ್ನು ನೋಡಿಕೊಂಡು ನಮಗಿಂತ ಚೆಂದವಾದ ಅಡುಗೆ ಮಾಡಿ ಬಡಿಸುತ್ತಾರೆ. ನಾವು ಬಾಯಿಯ ಮೇಲೆ ಬೆರಳಿಟ್ಟು ನೋಡಿಕೊಳ್ಳಬೇಕು ಅಂಥಹ ಪಾಕ ಸಿದ್ಧ ಮಾಡುತ್ತಾರೆ. ಆದರೆ ನಾವು ಅಡುಗೆ ಮನೆಗೆ ಹೊಕ್ಕ ವಯಸ್ಸಿಗೆ ಅವರು ಸುತಾರಾಂ ಹೊಕ್ಕುವುದಿಲ್ಲ. ಅವರು ಹಾಗೆ ಅಡುಗೆ ಮಾಡಲಿ ಎಂದು ನಾವು ಬಯಸುವುದಿಲ್ಲ. ನಮಗೆ ಬೇಕಾಗಿದ್ದು ಈಗ ಅವರ ಶಿಕ್ಷಣ  ಮತ್ತು ಅಂಕ.  

ಹೀಗೆ ನಾವು ತಲೆಮಾರಿನಿಂದ ತಲೆಮಾರಿಗೆ ಬದಲಾವಣೆಯನ್ನು ಬಯಸುತ್ತೇವೆ ಮತ್ತು ತರುತ್ತೇವೆ. ಆ ಬದಲಾವಣೆ ನಮಗೆ ಅವಶ್ಯವಾಗಿ ಬೇಕಾಗಿರುತ್ತದೆ. ಅದರ ಹಿಂದೆ ಬಾಯಿ ಚಟಕ್ಕೋ ಅಥವಾ ನಾವು ಸಂಪನ್ನರು ಎನ್ನಿಸಿಕೊಳ್ಳಲೋ ಅಥವಾ ನಾವು ಶ್ರೇಷ್ಠರು ಎನ್ನುವ ಭಾವವೋ ನಮ್ಮ ಮುಂದಿನ ತಲೆಮಾರನ್ನು ದೂರುತ್ತೇವೆ. ಓಟ್ ಆಫ್ ಓಟ್ ಮಾರ್ಕ್ಸ ತೆಗೆಯುವುದು ಸುಲಭವಲ್ಲ. ಶಿಕ್ಷಣದ ವ್ಯವಸ್ಥೆ ಕುಸಿದಿಲ್ಲ. ಮತ್ತಷ್ಟು ಬಲವಾಗಿದೆ. ಹಾಗಿರುವಾಗ ಸರಳ ಪ್ರಶ್ನೆ ನೀಡಿ ಇಷ್ಟೊಂದು ಅಂಕ ಪಡೆಯುತ್ತಾರೆ, ಅಥವಾ ಪೇಪರ್ ಚೆಕ್ಕಿಂಗ್ ಸರಿಯಾಗಿ ಮಾಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗಿದ್ದರೆ ಪರೀಕ್ಷೆ ಬರೆದವರೆಲ್ಲ ಪಾಸಾಗಿ ಬಿಡುತ್ತಿದ್ದರು. ಫೇಲಾದವರೂ ಇದ್ದಾರೆ. ಮಕ್ಕಳ ಶ್ರಮದ ಜೊತೆ ಮಕ್ಕಳ ಜ್ಞಾನ, ವಾತಾವರಣ ಬದಲಾವಣೆ, ತಿಳಿಸುವ ಗುಣಮಟ್ಟ ಎಲ್ಲವು ಪರಿವರ್ತನೆಯಾಗಿದೆ. ಆ ಪರಿವರ್ತನೆಗೆ ನಾವು ಒಗ್ಗಿಕೊಳ್ಳಬೇಕು. ನ್ಯೂನ್ಯತೆ ಎಲ್ಲ ಕಡೆಯಲ್ಲಿಯೂ ಇದೆ ಅದನ್ನು ತಿದ್ದಿಕೊಳ್ಳುತ್ತ ಮುಂದೆ ಸಾಗಲೇ ಬೇಕು.  

- * * * -