ನೇಪಾಳದಲ್ಲಿ ಮೃತಪಟ್ಟ ಕೇರಳದ ಐವರು ಪ್ರವಾಸಿಗರ ಅಂತ್ಯಸಂಸ್ಕಾರ

ತಿರುವನಂತಪುರಂ, ಜ 24 :    ನೇಪಾಳದ ರೆಸಾರ್ಟ್‌ವೊಂದರಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ ಐವರು ಪ್ರವಾಸಿಗರ ಮೃತದೇಹಗಳನ್ನು ಶುಕ್ರವಾರ ಇಲ್ಲಿನ ಚೆಂಕೊಟ್ಟುಕೋಣಂನ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ದುಬೈ ಮೂಲದ ಎಂಜಿನಿಯರ್ ಪ್ರವೀಣ್ ಕೃಷ್ಣನ್ ನಾಯರ್, ಅವರ ಪತ್ನಿ ಸರ್ನಾಯ ಸಾಸಿ ಮತ್ತು ಅವರ ಮೂವರು ಮಕ್ಕಳಾದ ಶ್ರೀಬದ್ರಾ, ಅರ್ಚಾ ಮತ್ತು ಅಭಿನವ್ ಅವರ ಮೃತದೇಹಗಳನ್ನು ಇಂದು ಬೆಳಿಗ್ಗೆ ಹುಟ್ಟೂರಿಗೆ ತರಲಾಯಿತು. ಅಂತಿಮ ಗೌರವ ಸಲ್ಲಿಸಲು ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು.

ಕಳೆದ  ಮಧ್ಯರಾತ್ರಿ ನವದೆಹಲಿಯಿಂದ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾದ ಮೃತದೇಹಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು.

ಮೂವರು ಮಕ್ಕಳ ಮೃತದೇಹಗಳನ್ನು ಒಟ್ಟಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಕಠ್ಮಂಡುವಿನ ಅದೇ ರೆಸಾರ್ಟ್‌ನಲ್ಲಿ  ಮೃತಪಟ್ಟಿದ್ದ ರಂಜಿತ್ ಕುಮಾರ್, ಅವರ ಪತ್ನಿ ಇಂದುಲಕ್ಷ್ಮಿ ಮತ್ತು ಅವರ ಎರಡು ವರ್ಷದ ಮಗ  ವೈಷ್ಣವ್‌ ಅವರ ಶವಗಳನ್ನು ಇಂದು ಮಧ್ಯಾಹ್ನ ಕೋಝಿಕ್ಕೋಡ್‌ನಲ್ಲಿರುವ ಅವರ ಹುಟ್ಟೂರಿಗೆ ತಂದು ಕೊನೆಯ ವಿಧಿವಿಧಾನ ನೆರವೇರಿಸಲಾಗುತ್ತದೆ.

ಕಠ್ಮಂಡುವಿನ ದಮನ್‌ನಲ್ಲಿರುವ ರೆಸಾರ್ಟ್‌ನಲ್ಲಿ ಇವರೆಲ್ಲರೂ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು.

ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಗುರುವಾರ ಶವಗಳನ್ನು ನೇಪಾಳದಿಂದ ನವದೆಹಲಿಗೆ ತರಲಾಯಿತು.

ಇದಕ್ಕೂ ಮೊದಲು ಕೇರಳ ಸರ್ಕಾರ ನೇಪಾಳದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಎಂಟು ಪ್ರವಾಸಿಗರ ಶವಗಳನ್ನು ವಿಮಾನದಲ್ಲಿ ಸಾಗಿಸುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿತ್ತು.